ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಲು ಕಾಂಗ್ರೆಸ್ ಅಪಪ್ರಚಾರ: ಎಚ್.ಡಿ.ಕುಮಾರಸ್ವಾಮಿ

Update: 2021-10-08 16:53 GMT

ರಾಮನಗರ, ಅ.8: ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಅಪಪ್ರಚಾರ ನಡೆಸುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಚನ್ನಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಬಿಟ್ಟು ಮಾತನಾಡಲು ಬೇರೆ ವಿಷಯ ಇಲ್ಲ. ಅವರ ರಾಜಕೀಯ ನನಗೆ ಬೇಸರ ತರಿಸಿದೆ ಎಂದರು.

ಜೆಡಿಎಸ್ ಪಕ್ಷವು ಬಿಜೆಪಿಯ ‘ಬಿ’ ಟೀಂ ಅಂತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದಾರೆ ಅಂತಾರೆ. ಆರೋಪಗಳಿಗೂ ಒಂದು ಮಿತಿ ಬೇಡವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಪದೇ ಪದೇ ನಿಮ್ಮ ಮೇಲೆ ದೂರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ಸಿದ್ದರಾಮಯ್ಯ ರೀತಿ ಕುಲಗೆಟ್ಟ ರಾಜಕೀಯ ನಾನು ಮಾಡುವುದಿಲ್ಲ. ಅಲ್ಪಸಂಖ್ಯಾತರು ಜೆಡಿಎಸ್ ಗೆಲ್ಲುವ ಕಡೆ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ, ಕಾಂಗ್ರೆಸ್ ಗೆಲ್ಲುವ ಕಡೆ ಆ ಪಕ್ಷಕ್ಕೆ ಮತ ಹಾಕಿ ಎಂದು ನಾನು ಹೇಳಿರುವುದು ನಿಜ ಎಂದರು.

ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದ್ದೆ. ಜೆಡಿಎಸ್ ಪಕ್ಷ ಎಲ್ಲಿ ಸ್ಟ್ರಾಂಗ್ ಇದೆ ಅಲ್ಲಿ ಪಕ್ಷ ಬೆಂಬಲಿಸಿ. ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆ ಅಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಅಂತಾ ಮುಕ್ತವಾಗಿ ಹೇಳಿದ್ದೇನೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರಿಗೆ ಈ ಹೃದಯ ವೈಶಾಲ್ಯತೆ ಇಲ್ಲ. ಅದರ ಬದಲಿಗೆ ನಮ್ಮ ಪಕ್ಷವನ್ನೇ ಮುಗಿಸುವ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ಉಳಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನ ಬೆಂಬಲಿಸಿ ಅಂತಾ ಹೇಳಿದ್ದೇನೆ. ಆದರೆ, ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ತಮ್ಮ ಕೀಳುಮಟ್ಟದ ರಾಜಕೀಯ ಏನು ಎಂಬುದನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News