ವಿಶ್ವಪ್ರಿಯ ಫೈನಾನ್ಸ್ ವಂಚನೆ ಪ್ರಕರಣ; ಸಿಐಡಿ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
ಬೆಂಗಳೂರು, ಅ.8: ತಮಿಳುನಾಡು ಮೂಲದ ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಯೂರಿಟೀಸ್ ಸಂಸ್ಥೆಯು ಹೂಡಿಕೆದಾರರಿಗೆ ವಂಚಿಸಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಯಾವುದಾದರೊಂದು ಕೇಂದ್ರೀಕೃತ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಈ ಸಂಬಂಧ ವಿಶ್ವಪ್ರಿಯ ಇನ್ವೆಸ್ಟರ್ಸ್ ಆ್ಯಂಡ್ ಡೆಪಾಸಿಟರ್ಸ್ ವೆಲ್‍ಫೇರ್ ಅಸೋಸಿಯೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ ಚಂದ್ರ ಶರ್ಮಾ ಅವರ ನೇತತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 13 ಎಫ್‍ಐಆರ್‍ಗಳನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರಕಾರ 2021ರ ಸೆ.24ರಂದು ಆದೇಶ ಹೊರಡಿಸಿದೆ. ಅರ್ಜಿದಾರರ ಮನವಿ ಈಡೇರಿದ್ದು, ಅರ್ಜಿಯನ್ನು ಇತ್ಯರ್ಥಪಡಿಸಬಹುದು ಎಂದು ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು.
ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವೀಸಸ್ ಸೆಕ್ಯೂರಿಟೀಸ್ ಏಜೆನ್ಸಿಯಲ್ಲಿ ನಗರದ ಸಾವಿರಾರು 200 ರಿಂದ 300 ಕೋಟಿ ರೂ. ಹೂಡಿಕೆ ಮಾಡಿರುವ ಮಾಹಿತಿ ಇದೆ. ಹೂಡಿಕೆ ಮೊತ್ತಕ್ಕೆ ವಾರ್ಷಿಕ ಶೇ.10.47ರಷ್ಟು ಹಿಂಪಾವತಿ (ರಿಟನ್ರ್ಸ್) ಮಾಡುವುದಾಗಿ ಭರವಸೆ ನೀಡಿದ್ದರೂ ಹಣ ಹಿಂದಿರುಗಿಸಿಲ್ಲ. ಈ ಕುರಿತು 2020ರ ಡಿಸೆಂಬರ್‍ನಲ್ಲಿ ನಗರದ ಗಿರಿನಗರ, ಸಿದ್ದಾಪುರ, ಜಯನಗರ, ವೈಟ್ ಫೀಲ್ಡ್, ಮಲ್ಲೇಶ್ವರಂ, ಅಲಸೂರು, ಮಾರತ್ತಹಳ್ಳಿ ಪೊಲೀಸ್ ಠಾಣೆಗಳಲ್ಲಿ ಸಂಸ್ಥೆ ವಿರುದ್ಧ ಎಫ್‍ಐಆರ್ ದಾಖಲಾಗಿವೆ. ಪ್ರಕರಣದ ತನಿಖೆಯನ್ನು ಒಂದು ಕೇಂದ್ರೀಕತ ತನಿಖಾ ಸಂಸ್ಥೆಗೆ ವಹಿಸಲು ಕುರಿತು ನಿರ್ಧಾರ ಕೈಗೊಳ್ಳುವಂತೆ ಅರ್ಜಿದಾರರು ಮನವಿ ಮಾಡಿದ್ದರು.