ಕಲಬುರಗಿ ಜಿಲ್ಲೆಯಲ್ಲಿ 24 ಗಂಟೆಯೊಳಗೆ ಮೂರು ಬಾರಿ ಲಘು ಭೂಕಂಪನ

Update: 2021-10-09 14:10 GMT
ಸಾಂದರ್ಭಿಕ ಚಿತ್ರ

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಮತ್ತೆ ಲಘು ಭೂಕಂಪನ ಸಂಭವಿಸಿದೆ. ಶನಿವಾರ ತಾಲೂಕಿನ ಹಲಚೇರಾ ಹಾಗೂ ಗಡಿಕೇಶ್ವರ ಗ್ರಾಮದಲ್ಲಿ ಬೆಳಗಿನ ಜಾವ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನದ ಅನುಭವವಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮೂರು ಬಾರಿ ಲಘು ಭೂಕಂಪ ಸಂಭವಿಸಿದೆ. 

ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದವು. ಇದರಿಂದ ಎಚ್ಚರಗೊಂಡ ಜನ ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದರು ಮತ್ತು ಮನೆಯಿಂದ ಹೊರಬಂದ ಗ್ರಾಮಸ್ಥರು ರಾತ್ರಿಯಿಡಿ ಮಳೆಯಲ್ಲಿಯೇ ಕಾಲ ಕಳೆದಿದ್ದಾರೆ.

ಶುಕ್ರವಾರವು ಜಿಲ್ಲೆಯಲ್ಲಿ 2.6 ತೀವ್ರತೆ ಕಂಪನವಾಗಿದ್ದು, ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಕಂಪನದ ಕೇಂದ್ರ ಬಿಂದುವಾಗಿತ್ತು. ಶನಿವಾರ ಕೂಡಾ ಲಘು ಭೂ ಕಂಪನವಾಗಿದೆ. ಕೆಲವೇ ಹೊತ್ತಲ್ಲಿ ಭೂಕಂಪನದ ತೀವ್ರತೆ ಬಗ್ಗೆ ಮಾಹಿತಿ ದೊರಕಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಆಗಾಗ ಲಘು ಭೂಕಂಪನ ಸಂಭವಿಸುತ್ತಿದೆ. ಕಾಳಗಿ ತಾಲೂಕಿನ ಹಲಚೇರಾ, ತೇಗಲತಿಪ್ಪಿ, ಹೊಸಳ್ಳಿ ಗ್ರಾಮದಲ್ಲಿ ಕೂಡಾ ಲಘು ಭೂಕಂಪನ ಅನುಭವವಾಗಿದೆ ಎಂದರು. ಕಲಬುರಗಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಭೂಮಿ ಮೂರು ಬಾರಿ ಕಂಪಿಸಿದ್ದು, ಜನ ಭಯಭೀತರಾಗಿದ್ದಾರೆ.

ಸದರಿ ಸಂಭವಿಸಿದ ಭೂಕಂಪನ ಅಪಾಯಕಾರಿ ಅಲ್ಲದ ಕಾರಣ ಜಿಲ್ಲೆಯ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸಾರ್ವಜನಿಕರಿಗೆ ಧೈರ್ಯ ಹೇಳಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News