'ಬೆಂಗಳೂರು ಉಸ್ತುವಾರಿಗಾಗಿ ಸಚಿವರ ನಡುವೆ ಪೈಪೋಟಿ'

Update: 2021-10-09 12:51 GMT
ಆರ್.ಅಶೋಕ್ / ವಿ.ಸೋಮಣ್ಣ

ಬೆಂಗಳೂರು, ಅ.9: ಬೆಂಗಳೂರು ಜಿಲ್ಲೆಯ ಉಸ್ತುವಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಯಾರಿಗೆ ಈ ಜವಾಬ್ದಾರಿಯನ್ನು ಹಂಚಿಕೆ ಮಾಡಬೇಕು ಅನ್ನೋದು ಅವರ ಪರಮಾಧಿಕಾರ. ಆದರೆ, ಬೇರೆಯವರಿಗೆ ಜವಾಬ್ದಾರಿ ನೀಡುವುದಿದ್ದರೆ ಜ್ಯೇಷ್ಠತೆಯನ್ನು ಪರಿಗಣಿಸಲಿ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆ.ಎಚ್.ಪಟೇಲ್ ಸಚಿವ ಸಂಪುಟದಲ್ಲಿ ಬೆಂಗಳೂರು ನಗರದ ಸಚಿವನಾಗಿದ್ದವನು. ನನಗೆ ಎಲ್ಲರಿಗಿಂತ ಹೆಚ್ಚು ಅನುಭವ ಮತ್ತು ಅರ್ಹತೆ ಇದೆ. ಆದುದರಿಂದ, ನನ್ನ ಹೆಸರನ್ನೂ ಪರಿಗಣಿಸಿ ಎಂದು ಮುಖ್ಯಮಂತ್ರಿಯನ್ನು ಕೇಳಿರುವುದು ನಿಜ ಎಂದರು.

ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ ಸೋಮಣ್ಣ, ಸಾಮ್ರಾಟ, ಚಕ್ರವರ್ತಿ ಕೆಲಸವೇ ಬೇರೆ, ನನ್ನ ಕೆಲಸವೇ ಬೇರೆ. ಬೆಂಗಳೂರು ಉಸ್ತುವಾರಿ ವಹಿಸಿಕೊಳ್ಳಲು ಯಾರ ಅನುಭವ ಏನು ಅನ್ನೋದನ್ನು ನೋಡುವುದು ಮುಖ್ಯಮಂತ್ರಿಗೆ ಬಿಟ್ಟದ್ದು. ನಾನು ಸಚಿವ ಆಗಿದ್ದಾಗ ಆರ್.ಅಶೋಕ್ ಇನ್ನೂ ಶಾಸಕ ಆಗಿದ್ದರು ಎಂದು ಅವರು ಹೇಳಿದರು.

ಬೆಂಗಳೂರು ನಗರದ ಉಸ್ತುವಾರಿಯನ್ನು ಅಶೋಕನಿಗೆ ಕೊಡ್ತಾರಾ, ಸಿಎಂ ಇಟ್ಟುಕೊಳ್ಳುತ್ತಾರಾ ಇಲ್ಲಾ ಸೋಮಣ್ಣನಿಗೆ ಕೊಡ್ತಾರ, ಇಲ್ಲಾ ಎರಡು ಮಾಡ್ತಾರ, ಏನು ಮಾಡಿದ್ರೂ ನಮ್ಮ ತಕರಾರಿಲ್ಲ. ಬೆಂಗಳೂರು ನಗರಕ್ಕೆ ಯಾರನ್ನೂ ಸದ್ಯಕ್ಕೆ ಉಸ್ತುವಾರಿ ಸಚಿವರನ್ನಾಗಿ ಮಾಡಿಲ್ಲ. ಕೋವಿಡ್ ನಿರ್ವಹಣೆ, ದಸರಾ ಮತ್ತು ಸ್ವಾತಂತ್ರ್ಯೋತ್ಸವ ಸಂಬಂಧ ತಾತ್ಕಾಲಿಕ ನೇಮಕಾತಿ ನಡೆದಿದೆ ಅಷ್ಟೇ. ಮೂರು, ನಾಲ್ಕು ದಿನಗಳಲ್ಲಿ ಈ ವಿಚಾರ ಸ್ಪಷ್ಟವಾಗುತ್ತದೆ ಎಂದು ಸೋಮಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆ. ಮೊದಲು ಕಾಂಗ್ರೆಸ್‍ನವರ ಮೇಲೆ ಮಾತ್ರ ದಾಳಿ ಅಂತ ಹೇಳುತ್ತಿದ್ದರು. ಕಾಂಗ್ರೆಸ್‍ನವರು ಈಗ ಏನು ಹೇಳುತ್ತಾರೆ? ಐಟಿಯವರು ದಾಖಲೆ ಸಂಗ್ರಹಿಸಿ ದಾಳಿ ಮಾಡಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ತಪ್ಪು ಎಂದು ಯಡಿಯೂರಪ್ಪ ಆಪ್ತರ ಮೇಲೆ ಆಗಿರುವ ಐಟಿ ದಾಳಿ ಕುರಿತು ಸೋಮಣ್ಣ ಪ್ರತಿಕ್ರಿಯಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News