ಕೇಸರಿಕರಣಕ್ಕಾಗಿ ನೂತನ ಶಿಕ್ಷಣ ನೀತಿ ಜಾರಿ: ಡಿ.ಕೆ. ಶಿವಕುಮಾರ್

Update: 2021-10-09 13:24 GMT
ಡಿ.ಕೆ. ಶಿವಕುಮಾರ್ (File Photo)

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) ಮೂಲಕ ಕೇಸರಿಕರಣ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಬೇರೆ ರಾಜ್ಯಗಳಲ್ಲಿ ಜಾರಿಯಾಗದ ಶಿಕ್ಷಣ ನೀತಿ ನಮ್ಮ ರಾಜ್ಯದಲ್ಲಿ ಮಾತ್ರ ತರಾತುರಿಯಲ್ಲಿ ಜಾರಿ ಮಾಡುತ್ತಿರುವುದೇಕೆ? ಈ ವಿಚಾರವಾಗಿ ಪೋಷಕರು, ಮಕ್ಕಳು, ಶಿಕ್ಷಣ ತಜ್ಞರ ಜತೆ ಚರ್ಚೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಶಿಕ್ಷಣ ವ್ಯವಸ್ಥೆಯನ್ನೆ ಏಕಕಾಲಕ್ಕೆ ಬದಲಿಸುತ್ತೇನೆ, ನಿಮ್ಮ ಪದವಿಗೆ ಪ್ರಾಮುಖ್ಯತೆ ಇಲ್ಲ, ಒಂದು ವರ್ಷ ಪದವಿ ಓದಿದರೂ ಪ್ರಮಾಣಪತ್ರ ಕೊಡುತ್ತೇವೆ ಎನ್ನುವುದಾದರೆ ಇವರು ಯಾವ ಸೀಮೆ ಶಿಕ್ಷಣ ವ್ಯವಸ್ಥೆ ತರಲು ಹೊರಟಿದ್ದಾರೆ ಎಂದು ಕಿಡಿಗಾರಿದರು.

ಗುರುಕುಲ ಸಂಸ್ಕೃತಿ ಎನ್ನುತ್ತಾರಲ್ಲಾ, ಇಷ್ಟು ದಿನ ನಮ್ಮಲ್ಲಿದ್ದ ಶಿಕ್ಷಣ ವ್ಯವಸ್ಥೆ ಏನಾಗಿದೆ? ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಇಡೀ ವಿಶ್ವದ ಆರ್ಥಿಕತೆ ಕುಸಿದುಬಿದ್ದರೂ ಭಾರತದ ಆರ್ಥಿಕತೆ ಬಿದ್ದಿರಲಿಲ್ಲ. ಅಂತಹ ಶಿಕ್ಷಣ ಬೇಡವೇ? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದಿದ ಡಾಕ್ಟರ್, ಇಂಜಿನಿಯರ್‍ಗಳು ವಿಶ್ವದೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ. ಅದು ಸರಿ ಇಲ್ಲವೇ? ಇವರು ದಿನಬೆಳಗಾದರೆ ತಮ್ಮ ವಿಚಾರಧಾರೆಯನ್ನು ಮಕ್ಕಳ ತಲೆಗೆ ತುಂಬಲು ಈ ರೀತಿ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಶಿಕ್ಷಣ ನೀತಿ ಜಾರಿಗೆ ತರುವುದೇ ಆದರೆ, ಸಂಸತ್ತಿನಲ್ಲಿ ಯಾಕೆ ಚರ್ಚೆಯಾಗಿಲ್ಲ? ವಿಧಾನಮಂಡಲ ಅಧಿವೇಶನದಲ್ಲಿ ಯಾಕೆ ಚರ್ಚೆಯಾಗಿಲ್ಲ? ಈ ವಿಚಾರವಾಗಿ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಪೋಷಕರಲ್ಲಿ ಅರಿವು ಮೂಡಿಸುತ್ತೇವೆ. ನಾನು ರಾಜಕಾರಣಿಯಷ್ಟೇ ಅಲ್ಲ. ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದು, ನಾನು ಇದನ್ನು ಆಳವಾಗಿ ಅಧ್ಯಯನ ಮಾಡಿದ್ದೇನೆ. ಇದರಲ್ಲಿ ಒಂದೆರಡು ಒಳ್ಳೆಯ ಅಂಶಗಳಿರಬಹುದು, ಆದರೆ ಇದು ಸ್ಪಷ್ಟವಾಗಿ ಕೇಸರಿಕರಣದ ಪ್ರಯತ್ನ ಎಂದು ಶಿವಕುಮಾರ್ ದೂರಿದರು.

ಇದು ಒಳ್ಳೆಯ ನೀತಿಯಾಗಿದ್ದರೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತಿನಲ್ಲಿ ಜಾರಿಗೊಳಿಸಲು ಹೇಳಿ. ಬೇರೆ ರಾಜ್ಯಗಳಲ್ಲಿ ಮಾಡಲಾಗದ್ದನ್ನು ನಮ್ಮಲ್ಲಿ ಮಾಡಿದ್ದೇನೆ ಎಂದು ಹೈಕಮಾಂಡ್ ಓಲೈಸಲು ಹೊರಟಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಬಿಡುವುದಿಲ್ಲ. ಇದರ ವಿರುದ್ಧ ಚಳವಳಿ, ಆಂದೋಲನ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಐಟಿ ದಾಳಿ: ‘ನೀರಾವರಿ ಇಲಾಖೆ ವಿಚಾರವಾಗಿ ಗುತ್ತಿಗೆದಾರರು ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಸಹಾಯಕರ ಮನೆ ಮೇಲೆ ತೆರಿಗೆ ಇಲಾಖೆ ದಾಳಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ನೋಡಿದೆ. ಇದರ ಹಿಂದೆ ಅನೇಕ ಲೆಕ್ಕಾಚಾರಗಳಿವೆ. ತೆರಿಗೆ ಇಲಾಖೆ ಕಡೆಯಿಂದ ಅಧಿಕೃತ ಹೇಳಿಕೆ ಬರುವವರೆಗೂ ನಾವು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಏಕಾಏಕಿಯಾಗಿ ಇದು ರಾಜಕೀಯ ಪ್ರೇರಿತ ಎಂದು ಹೇಳಲು ನನ್ನ ಬಳಿ ಖಚಿತ ಮಾಹಿತಿ ಇಲ್ಲ. ಯಾರ ಮನೆಯಲ್ಲಿ ಎಷ್ಟು ಹಣ ಸಿಕ್ಕಿದೆ, ಏನು ದಾಖಲೆ ಸಿಕ್ಕಿದೆ ಎಂದು ಮಾಹಿತಿ ಬರುವವರೆಗೂ ಮಾತನಾಡಲು ಸಾಧ್ಯವಿಲ್ಲ. ಆಂತರಿಕ ರಾಜಕೀಯ ಇದ್ದೇ ಇರುತ್ತದೆ ಎಂದು ಅವರು ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಅಧಿಕಾರದಲ್ಲಿದೆ. ಅವರು ಯಾರನ್ನಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದರೆ ಅದನ್ನು ಮಾಡುತ್ತಾರೆ. ಆತ ಯಡಿಯೂರಪ್ಪ ಅವರ ಆಪ್ತ ಸಹಾಯಕ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ ಅಲ್ಲವೇ? ಕೇವಲ ಅವರು ಮಾತ್ರವಲ್ಲ. ಈ ಹಿಂದೆ ಇದ್ದ ಮಾಜಿ ನೀರಾವರಿ ಮಂತ್ರಿಗಳ ಮೇಲೆ ವಿಚಾರಣೆ ನಡೆಯಲಿದೆ ಎಂಬ ಮಾಹಿತಿ ಬಂದಿದೆ. ಕೆಲವು ಮಂತ್ರಿಗಳು ನಮ್ಮ ಮನೆ ಮೇಲೆ ದಾಳಿ ಮಾಡಬೇಡಿ ಎಂದು ದಿಲ್ಲಿಯಲ್ಲಿ ಹೋಗಿ ಮನವಿ ಮಾಡಿದ್ದರು ಎಂಬ ಮಾಹಿತಿ ಇದೆ ಎಂದು ಶಿವಕುಮಾರ್ ದೂರಿದರು.

ಐಟಿ ದಾಳಿ ಒಂದೆರಡು ದಿನಗಳಲ್ಲಿ ಮಾಡುವ ವಿಚಾರವಲ್ಲ. ಇದರ ಹಿಂದೆ ಪ್ಲಾನ್ ಇರುತ್ತದೆ. ಕೆಲವರನ್ನು ರಕ್ಷಣೆ ಮಾಡುತ್ತಿದ್ದಾರೆ. ನೀರಾವರಿ ಇಲಾಖೆಗೆ ಸಂಬಂಧಿಸಿದ ದಾಳಿ ಎಂದರೆ ಕಳೆದೊಂದು ವರ್ಷದಿಂದ ಏನೇನಾಗಿದೆ ಎಂಬ ಮಾಹಿತಿ ಇರುತ್ತದೆ. ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯೂ ಇದೆ. ಐಟಿ ದಾಳಿ ನಂತರ ಕೇವಲ ಮುಖ್ಯಮಂತ್ರಿ ಮಾತ್ರ ದಿಲ್ಲಿಗೆ ಹೋಗಿಲ್ಲ. ಅವರ ಜತೆ ಮಾಜಿ ನೀರಾವರಿ ಮಂತ್ರಿಗಳೂ ಹೋಗಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News