ರಾಜ್ಯದಲ್ಲಿನ ಕಲ್ಲಿದ್ದಲು ಕೊರತೆ ನೀಗಿಸಲು ಕೇಂದ್ರ ಸಚಿವರಿಗೆ ಮನವಿ: ಸಿಎಂ ಬಸವರಾಜ ಬೊಮ್ಮಾಯಿ

Update: 2021-10-09 14:30 GMT
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಅ.9: ರಾಜ್ಯದಲ್ಲಿನ ಕಲ್ಲಿದ್ದಲು ಕೊರತೆ ನೀಗಿಸಲು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಇಂದು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಎರಡು ದಿನಗಳ ಹೊಸದಿಲ್ಲಿ ಪ್ರವಾಸದಿಂದ ಹಿಂದಿರುಗಿದ ಬಳಿಕ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವದಲ್ಲೆ ಕಲ್ಲಿದ್ದಲು ಸಮಸ್ಯೆಯಿದೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಕಲ್ಲಿದ್ದಲಿನ ಕೊರತೆ ಬಾಧಿಸುತ್ತಿದೆ ಎಂದರು.

ಕರ್ನಾಟಕದಲ್ಲಿ ಕಲ್ಲಿದ್ದಲಿನ ಸಂಗ್ರಹ ಕಡಿಮೆಯಾಗಬಾರದೆಂಬ ದೃಷ್ಟಿಯಿಂದ ಪ್ರಹ್ಲಾದ್ ಜೋಶಿಯವರನ್ನು ಮನವಿ ಮಾಡಲಾಗಿದೆ. ರಾಜ್ಯಕ್ಕೆ ಪ್ರಸ್ತುತ ಸರಬರಾಜಾಗುತ್ತಿರುವ 10 ರೇಕ್ ಕಲ್ಲಿದ್ದಲ್ಲನ್ನು ಹೆಚ್ಚಿಸಿ 14 ರೇಕ್ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು. 

ಕೇಂದ್ರ ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ, ರಬಿ ಹಂಗಾಮಿಗೆ ಸುಮಾರು 32 ಸಾವಿರ ಮೆಟ್ರಿಕ್ ಟನ್ ಡಿಎಪಿ ಹಾಗೂ ಸುಮಾರು 10 ಸಾವಿರ ಮೆಟ್ರಿಕ್ ಟನ್ ಎಂಓಪಿ ಕೊರತೆ ಇದ್ದು, ಇದನ್ನು ಒದಗಿಸುವಂತೆ ಮನವಿ ಮಾಡಲಾಯಿತು. ಇದನ್ನು ಒಂದು ವಾರದೊಳಗೆ ಒದಗಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದಲ್ಲಿ ಡಿಸೆಂಬರ್ ಅಂತ್ಯದೊಳಗೆ ಮೊದಲನೇ ಡೋಸ್ 90 ಶೇಕಡಾ ಹಾಗೂ ಎರಡನೇ ಡೋಸ್ 70 ಶೇಕಡಾ ಕೊಡುವ ಗುರಿಗೆ ಕೇಂದ್ರ ಆರೋಗ್ಯ ಸಚಿವರು ಸಂಪೂರ್ಣ ಸಹಕಾರ ನೀಡುವ  ಭರವಸೆ ನೀಡಿದ್ದಾರೆ. ನಮ್ಮ ರಾಜ್ಯದ ಜನಸಂಖ್ಯೆಯನ್ನು ಲಸಿಕೀಕರಣದ ಅಡಿಯಲ್ಲಿ ತರಬೇಕೆಂಬ ಉದ್ದೇಶ ನಮ್ಮದು ಎಂದು ಅವರು ಹೇಳಿದರು.

ಜಿಎಸ್‍ಟಿ ವಿಚಾರದ ಬಗ್ಗೆ ಚರ್ಚೆ ನಡೆಸಲು ರಚಿಸಲಾಗಿರುವ ಗ್ರೂಪ್ ಆಫ್ ಮಿನಿಸ್ಟರ್‍ಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಜೊತೆಗೆ ನಬಾರ್ಡ್‍ನಿಂದ ಹೆಚ್ಚಿನ ಸಾಲ ನೀಡಲು ಬೇಡಿಕೆ ಇಟ್ಟಿದ್ದು, ಅದಕ್ಕೆ ಅವರು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲು ಪ್ರಯತ್ನಿಸಿದೆ. ಆದರೆ, ಅವರು ಅನ್ಯ ಕಾರ್ಯಕ್ರಮಗಳಲ್ಲಿ ತಲ್ಲೀನರಾಗಿದ್ದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ ನೀಡಬೇಕು ಎಂಬುದರ ಕುರಿತು ಸ್ವಾಭಾವಿಕವಾಗಿ ಎಲ್ಲರ ಜೊತೆ ಚರ್ಚೆ ಮಾಡಿ ಹಂಚಿಕೆ ಮಾಡುತ್ತೇನೆ. ಎಲ್ಲರೂ ನಮ್ಮವರೇ ಇದ್ದಾರೆ. ಬೆಂಗಳೂರು ಬಹಳ ಮಹತ್ವದ್ದು, ಆದುದರಿಂದ, ಯಾವುದೆ ರೀತಿಯ ತೊಂದರೆಯಾಗದಂತೆ, ಎಲ್ಲರ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News