ಅ.11ರಿಂದ ಒಂದು ವಾರ ಹೈಕೋರ್ಟ್‍ಗೆ ದಸರಾ ರಜೆ: ತುರ್ತು ಪ್ರಕರಣ ಮಾತ್ರ ವಿಚಾರಣೆ

Update: 2021-10-09 14:39 GMT
File Photo: PTI

ಬೆಂಗಳೂರು: ದಸರಾ ಹಿನ್ನೆಲೆಯಲ್ಲಿ ಅ.11ರಿಂದ 16ರವರೆಗೆ ಕಲಬುರಗಿ ಹಾಗೂ ಧಾರವಾಡ ಪೀಠವೂ ಸೇರಿ ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠಕ್ಕೂ ಒಂದು ವಾರ ದಸರಾ ರಜೆ ನೀಡಲಾಗಿದೆ.

ಅ.12ರಂದು ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪ್ರಧಾನ, ಧಾರವಾಡ ಮತ್ತು ಕಲಬುರಗಿ ಪೀಠಕ್ಕೆ ಕೆಳಗೆ ಸೂಚಿಸಲಾದ ನ್ಯಾಯಮೂರ್ತಿಗಳನ್ನು ರಜಾಕಾಲೀನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿದ್ದಾರೆ.

ಬೆಂಗಳೂರಿನ ಪ್ರಧಾನ ಪೀಠದ ಒಂಭತ್ತನೆ ಕೋರ್ಟ್ ಹಾಲ್‍ನಲ್ಲಿ ನ್ಯಾಯಮೂರ್ತಿಗಳಾದ ಕೆ.ಎಸ್.ಮುದ್ಗಲ್ ಮತ್ತು ಎಂಜಿಎಸ್ ಕಮಲ್ ನೇತೃತ್ವದ ವಿಭಾಗೀಯ ಪೀಠವು ಪ್ರಕರಣಗಳ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಎನ್.ಎಸ್.ಸಂಜಯ್‍ಗೌಡ ಮತ್ತು ವಿ.ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಕ್ರಮವಾಗಿ ಹತ್ತು ಮತ್ತು ಹನ್ನೊಂದನೆ ಹಾಲ್‍ನಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗದುಮ್ ಮತ್ತು ಪಿ.ಎನ್.ದೇಸಾಯಿ ನೇತೃತ್ವದ ವಿಭಾಗೀಯ ಪೀಠವು ಎರಡನೆ ಕೊಠಡಿಯಲ್ಲಿ ವಿಚಾರಣೆ ನಡೆಸಲಿದೆ. 

ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್ ಎಸ್ ಕಿಣಗಿ ಮತ್ತು ಆರ್. ನಟರಾಜ್ ನೇತೃತ್ವದ ವಿಭಾಗೀಯವು ಪ್ರಕರಣಗಳ ವಿಚಾರಣೆ ನಡೆಸಲಿದೆ. ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ ಏಕಸದಸ್ಯ ಪೀಠದ ಪ್ರಕರಣಗಳನ್ನು ಅದೇ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ನಡೆಸಲಿದ್ದಾರೆ. ತಡೆಯಾಜ್ಞೆ, ಮಧ್ಯಂತರ ನಿರ್ದೇಶನಗಳು ಮತ್ತು ತಾತ್ಕಾಲಿಕ ಪ್ರತಿಭಂದಕಾದೇಶಗಳಿಗೆ ಮಾತ್ರ ವಿಚಾರಣೆ ಸೀಮಿತವಾಗಿರಲಿದೆ. ಮೇಲ್ಮನವಿ, ಹೊಸ ಮನವಿ ಸಲ್ಲಿಕೆ ಸೇರಿದಂತೆ ಇತರೆ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಮಂಗಳವಾರ ಪ್ರಕರಣಗಳ ವಿಚಾರಣೆ ನಿಗದಿಯಾಗಿರುವುದರಿಂದ ಸೋಮವಾರ ಬೆಳಗ್ಗೆ 10.30ರಿಂದ 12.30ರ ಒಳಗೆ ಮನವಿ ಸಲ್ಲಿಸಬಹುದಾಗಿದೆ. ನಿರ್ದಿಷ್ಟ ಪ್ರಕರಣಗಳನ್ನು ಸಂಬಂಧಿತ ಪೀಠಗಳಿಗೆ ಹಂಚಿಕೆ ಮಾಡಲಾಗಿದೆ.

ರಜಾ ಕಾಲದಲ್ಲಿ ಸೋಮವಾರ ಮತ್ತು ಬುಧವಾರ ಬೆಳಗ್ಗೆ 10ರಿಂದ 12.30ರವರೆಗೆ ನಿರ್ದಿಷ್ಟ ಕೌಂಟರ್‍ಗಳಲ್ಲಿ ಬಾಕಿ ಇರುವ ಎಲ್ಲ್ಲ ಪ್ರಕರಣಗಳಲ್ಲಿ ವಕಾಲತ್ತು, ಶುಲ್ಕ ಮತ್ತು ಮೊಮೊಗಳನ್ನು ಸ್ವೀಕರಿಸಲಾಗುವುದು. ರಜಾ ಕಾಲದ ಪೀಠವು ವಿಚಾರಣೆ ನಡೆಸುವ ದಿನ ದಾಖಲೆಗಳನ್ನು ಬೆಳಗ್ಗೆ 10ರಿಂದ 1 ಗಂಟೆಗೆ ಮತ್ತು ಮಧ್ಯಾಹ್ನ 2ರಿಂದ 4ರ ವರೆಗೆ ಸ್ವೀಕರಿಸಲಾಗುವುದು. ಅ.16ರ ವರೆಗೆ ಪ್ರಕರಣಗಳನ್ನು ಪಟ್ಟಿ ಮಾಡುವುದಕ್ಕೆ ಸಂಬಂಧಿಸಿದಂತೆ ಮೊಮೊಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ನ್ಯಾಯಿಕ ರಿಜಿಸ್ಟ್ರಾರ್ ಕೆ.ಎಸ್.ಭರತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News