ಡಿಕೆಶಿ ಹೇಳಿಕೆ ಅಪ್ಪಟ ಸುಳ್ಳು: ಎಚ್.ಡಿ. ಕುಮಾರಸ್ವಾಮಿ ಕಿಡಿ

Update: 2021-10-09 14:51 GMT
ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು. ವ್ಯಕ್ತಿ ಇಲ್ಲವಾದ ಮೇಲೆ ಅವರ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ರಾಜಕೀಯವಾಗಿ, ವೈಯಕ್ತಿಕವಾಗಿ ‘ಅನೈತಿಕ’ ಎಂಬುದು ನನ್ನ ಅಭಿಪ್ರಾಯ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ‘ಅಪ್ಪಟ ಸುಳ್ಳು’ ಹೇಳುವ ಮೂಲಕ ದಿವಂಗತ ನಾಯಕ ಎಂ.ಸಿ.ಮನಗೂಳಿ ಅವರಿಗೆ ಅಪಚಾರ ಮಾಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ತಾವು ನಿಧನರಾಗುವುದಕ್ಕೆ 15 ದಿನ ಮೊದಲು ಮನಗೂಳಿ ಅವರು ತಮ್ಮ ಪುತ್ರ ಅಶೋಕ್ ಅವರನ್ನು ಕರೆದುಕೊಂಡು ನಮ್ಮ ಮನೆಗೆ ಬಂದಿದ್ದರು. ನನಗೆ ವಯಸ್ಸಾಗಿದೆ, ಆರೋಗ್ಯ ಸರಿ ಇಲ್ಲ. ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ, ಅಶೋಕನನ್ನು ನಿಮ್ಮ ಹಾಗೂ ಸಿದ್ದರಾಮಯ್ಯ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದರಂತೆ ಎಂದು ಟೀಕಿಸಿದ್ದಾರೆ.

ಸುಳ್ಳುಗಳನ್ನು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎನ್ನುವುದಕ್ಕೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಬೇರೆ ಇಲ್ಲ. ಸತ್ಯ ಏನೆಂದರೆ, ಕೋವಿಡ್ ಸೋಂಕಿತರಾಗಿದ್ದ ಮನಗೂಳಿ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ನಾವೇ ಸೇರಿಸಿದ್ದೆವು. 19 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದರು ಎಂದು ಅವರು ಹೇಳಿದ್ದಾರೆ.

ಜನವರಿ 9ರಂದು ಮನಗೂಳಿ ಅವರು ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಜನವರಿ 28ರಂದು ಅಲ್ಲಿಯೇ ನಿಧನರಾದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನಗೂಳಿ ಅವರನ್ನು ನಾನೂ ಸೇರಿ ಅವರ ಮಕ್ಕಳೂ ನೋಡಲಾಗಲಿಲ್ಲ. ಅದಕ್ಕೂ ಮೊದಲು ಅವರು ಒಂದೂವರೆ ತಿಂಗಳ ಕಾಲ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಅವರು ತಿಳಿಸಿದ್ದಾರೆ.

ಹಾಗಾದರೆ, ಮನಗೂಳಿ ಅವರು ಡಿ.ಕೆ.ಶಿವಕುಮಾರ್ ಮನೆಗೆ ಹೋಗಿದ್ದು ಯಾವಾಗ? ಮಕ್ಕಳನ್ನು ಮಡಿಲಿಗೆ ಹಾಕಿಕೊಳ್ಳಿ ಎಂದಿದ್ದು ಎಂದು? ಅವರ ‘ಹಸಿಸುಳ್ಳುಗಳು ಅಸಹ್ಯ ಹುಟ್ಟಿಸುವಂತಿವೆ’. ನಮ್ಮ ಪಕ್ಷದ ಅಭ್ಯರ್ಥಿಯಾಗಬೇಕಿದ್ದ ಅಶೋಕ್ ಮನಗೂಳಿ ಅವರನ್ನು ಹೈಜಾಕ್ ಮಾಡಿದ್ದಲ್ಲದೆ, ಈಗ ಸುಳ್ಳುಗಳ ಸರಮಾಲೆ ಹಣೆಯುತ್ತಾ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಂದಗಿ ಜನತೆಗೆ ಯಾಮಾರಿಸುವ ಪ್ರಯತ್ನ ಬೇಡ. ಅಭ್ಯರ್ಥಿಗೆ ದಿಕ್ಕಿಲ್ಲದ ಕಾಂಗ್ರೆಸ್ ಪಕ್ಷದ ನಾಯಕರು ಈಗ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ನಮ್ಮ ಪಕ್ಷ ಹಾಗೂ ಎಚ್.ಡಿ.ದೇವೇಗೌಡರ ಬಗ್ಗೆ ಅಚಲ ನಿಷ್ಠೆ ಹೊಂದಿದ್ದ ದಿವಂಗತ ಮನಗೂಳಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News