ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಅಗತ್ಯ ನಮಗಿಲ್ಲ:ಡಿ.ಕೆ. ಶಿವಕುಮಾರ್

Update: 2021-10-09 14:52 GMT
ಡಿ.ಕೆ. ಶಿವಕುಮಾರ್

ಬೆಂಗಳೂರು, ಅ.9: ‘ಮನಗೂಳಿ ಅವರು ನಮ್ಮನ್ನು ಬಂದು ಭೇಟಿ ಮಾಡಿದ್ದು ನಿಜ. ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಸ್ಥಿತಿ ಕಾಂಗ್ರೆಸ್‍ಗೆ ಬಂದಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಬೇಡ ಎನ್ನುವುದಿಲ್ಲ. ಕುಮಾರಸ್ವಾಮಿ ನೋವಿನಿಂದ ಮಾತನಾಡಿದ್ದು, ಅವರ ಮಾತಿಗೆ ನಾನು ಬೇಸರ ಪಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸಿಂದಗಿ ಉಪಚುನಾವಣೆಯಲ್ಲಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್‍ಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶನಿವಾರ ನಗರದಲ್ಲಿ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

‘ಅಶೋಕ್ ಅವರು ನಮ್ಮ ಅಭ್ಯರ್ಥಿ. ಮನಗೂಳಿ ಅವರು ಬಂದು ನನ್ನನ್ನು ಭೇಟಿ ಮಾಡಿ ಮಾತನಾಡಿದ ವಿಚಾರ ನನಗೆ, ಮನಗೂಳಿ ಹಾಗೂ ಅವರ ಪುತ್ರ ಅಶೋಕ್‍ಗೆ ಗೊತ್ತಿದೆ. ನಾನು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದು, ಗೌಪ್ಯವಾಗಿ ಹೇಳಿಲ್ಲ. ನಾನು ಮಾತ್ರವಲ್ಲ ಸಿದ್ದರಾಮಯ್ಯನವರು ಕೂಡ ಈ ವಿಷಯ ಪ್ರಸ್ತಾಪಿಸಿದ್ದಾರೆ. ನಾವು ಈ ವಿಚಾರದಲ್ಲಿ ಯಾಕೆ ಸುಳ್ಳು ಹೇಳಬೇಕು? ಅದರ ಅಗತ್ಯ ನಮಗೇನಿದೆ? ಬೇಕಿದ್ದರೆ ಅಶೋಕ್ ಮನಗೂಳಿ ಅವರನ್ನೇ ಕೇಳಿ ಎಂದು ಶಿವಕುಮಾರ್ ಹೇಳಿದರು.

15 ದಿನಗಳ ಹಿಂದೆ ಭೇಟಿ ಮಾಡಿದ್ದರು ಅಂದರೆ ಕ್ಯಾಲೆಂಡರ್ ತೆಗೆದುಕೊಂಡು ಲೆಕ್ಕಹಾಕಿ ಹೇಳಿಲ್ಲ. ಅವರು ಸಾಯುವ ಸ್ವಲ್ಪ ದಿನಗಳ ಮೊದಲು ಭೇಟಿ ಮಾಡಿದ್ದರು. ತಮ್ಮ ಪಕ್ಷದಲ್ಲಿದ್ದವರು ಕಾಂಗ್ರೆಸ್‍ಗೆ ಹೋಗಿದ್ದಾರಲ್ಲ ಎಂಬ ನೋವು ಕುಮಾರಣ್ಣ ಅವರಿಗಿದೆ. ಆ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ನಾವು ಯಾರನ್ನೂ ಹೈಜಾಕ್ ಮಾಡುವುದಿಲ್ಲ. ನಮ್ಮಲ್ಲಿ ಸಾಕಷ್ಟು ಸಂಖ್ಯಾಬಲ ಇದೆ. ನಮ್ಮ ಪಕ್ಷಕ್ಕೆ ಸ್ವ ಇಚ್ಛೆಯಿಂದ ಬರುವವರನ್ನು ನಾವು ಬೇಡ ಎನ್ನುವುದಿಲ್ಲ ಎಂದು ಹೇಳಲು ಆಗುವುದಿಲ್ಲ ಎಂದು ಅವರು ತಿಳಿಸಿದರು.

ರಾಜಕಾರಣ ನಿಂತ ನೀರಲ್ಲ ಎಂದು ಕುಮಾರಣ್ಣ ಅವರೇ ಹೇಳಿದ್ದಾರೆ. ಕೆಲವರು ಬಿಜೆಪಿಗೆ ಹೋಗಲು ಸಿದ್ಧರಿರುತ್ತಾರೆ. 17 ಜನ ಸಂಸದರು ಗೆದ್ದು, ದೇವೇಗೌಡರು ದೇಶದ ಪ್ರಧಾನಿ ಆದಾಗ, ನಾವು ಅವರನ್ನು ಹೈಜಾಕ್ ಮಾಡಿ ಕರೆದುಕೊಂಡು ಬಂದಿದ್ದೆವಾ? ಒಂದಲ್ಲಾ ಒಂದು ಕಾರಣದಿಂದ ಬರುವವರು ಬರುತ್ತಾರೆ. ಈ ಹಿಂದೆ ಅನೇಕ ನಾಯಕರು ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್‍ಗೆ ಬಂದಿದ್ದರು. ಅದೇ ರೀತಿ ಮನಗೂಳಿ ಅವರು ಸಾಯುವ ಮುನ್ನ ನನ್ನನ್ನು ಭೇಟಿ ಮಾಡಿದ್ದು ನಿಜ. ಆಗ ಅವರ ಪುತ್ರ ಅಶೋಕ್ ಅವರು ಇದ್ದದ್ದೂ ನಿಜ ಎಂದು ಶಿವಕುಮಾರ್ ಪುನರುಚ್ಚರಿಸಿದರು.

ನಾವು ಯಾರ ಮತವನ್ನೂ ಗುತ್ತಿಗೆಗೆ ತೆಗೆದುಕೊಂಡಿಲ್ಲ. ನನ್ನ ಮತವನ್ನೇ ನಾನು ಗುತ್ತಿಗೆ ತೆಗೆದುಕೊಳ್ಳಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಗೌಪ್ಯವಾಗಿ ಮತ ಹಾಕುತ್ತಾರೆ ಎಂದು ಕುಮಾರಸ್ವಾಮಿಗೆ ಶಿವಕುಮಾರ್ ತಿರುಗೇಟು ನೀಡಿದರು.

ಎರಡೂ ಕ್ಷೇತ್ರಗಳಲ್ಲಿ ನಮಗೆ ಉತ್ತಮ ಬೆಂಬಲ: ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಪರವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಸಾಹ, ಬೆಂಬಲ ಸಿಕ್ಕಿದ್ದು, ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆವರೆಗೂ ಇದ್ದ ಚುನಾವಣೆ ಪ್ರಚಾರದ ಅವಕಾಶವನ್ನು ರಾತ್ರಿ 7ಗಂಟೆಗೆ ಸೀಮಿತಗೊಳಿಸಿ ಹೊಸ ನಿಯಮ ತಂದಿದ್ದಾರೆ. ನಾವು ನಮ್ಮದೇ ಆದ ತಂತ್ರಗಾರಿಕೆ ಮೂಲಕ ಪ್ರಚಾರ ಮಾಡುತ್ತೇವೆ. ನಾವು ನಿತ್ಯ ಆಂತರಿಕ ವರದಿ ಪಡೆಯುತ್ತಿರುತ್ತೇವೆ. ಮುಖ್ಯಮಂತ್ರಿಗಳಿಗೂ ನಿತ್ಯ ವರದಿ ಹೋಗುತ್ತಿರುತ್ತದೆ. ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂಬ ಮಾಹಿತಿಯೇ ಮುಖ್ಯಮಂತ್ರಿಗೆ ರವಾನೆಯಾದ ವರದಿಯಲ್ಲೂ ಇದೆ ಎಂದು ಅವರು ಹೇಳಿದರು.

'ರಮೇಶ್ ಜಾರಕಿಹೊಳಿ ಆಪ್ತರು ಭೇಟಿ ಮಾಡಿದ್ದು ನಿಜ'
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತರು ನನ್ನನ್ನು ಬಂದು ಭೇಟಿ ಮಾಡಿದ್ದರು. ಅನೇಕ ವಿಚಾರ ಚರ್ಚೆ ಮಾಡಿದ್ದಾರೆ. ಅವರ ಸಂದೇಶಗಳನ್ನು ತಿಳಿಸಿದ್ದಾರೆ. ಈ ವಿಚಾರಗಳನ್ನು ನಾನು ಈಗ ಗೌಪ್ಯವಾಗಿ ಇಡಬೇಕಿದೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News