ಸಾಂಪ್ರದಾಯಿಕವಾಗಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ: ಪಟಾಕಿ ಸದ್ದಿಗೆ ಬೆದರಿದ ಅಂಬಾರಿ ಹೊತ್ತ ಆನೆ

Update: 2021-10-09 15:15 GMT

ಮಂಡ್ಯ: ಅಂಬಾರಿ ಹೊತ್ತ ಆನೆಯು ಪಟಾಕಿ, ಮಂಗಳ ವಾದ್ಯಗಳ ಸದ್ದಿಗೆ ಬೆದರಿದ ಹಿನ್ನೆಲೆಯಲ್ಲಿ ಜಂಬೂಸವಾರಿಗೆ ಬದಲಾಗಿ ಬೆಳ್ಳಿರಥದಲ್ಲಿ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಮೆರವಣಿಗೆ ನಡೆಸುವ ಮೂಲಕ ಶನಿವಾರ ಪಾರಂಪರಿಕ ಶ್ರೀರಂಗಪಟ್ಟಣ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

ಶ್ರೀರಂಗಪಟ್ಟಣ ಸಮೀಪದ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಶನಿವಾರ ಮಧ್ಯಾಹ್ನ ಚಾಲನೆ ನೀಡಿದರು.

ಆದರೆ, ಮೆರವಣಿಗೆ ಸ್ವಲ್ಪ ದೂರ ಸಾಗುವಷ್ಟರಲ್ಲೇ ಪಟಾಕಿ ಹಾಗೂ ವಾದ್ಯಗಳ ಸದ್ದಿಗೆ ಅಂಬಾರಿ ಹೊತ್ತ ಆನೆ (ಗೋಪಾಲಸ್ವಾಮಿ) ಬೆದರಿದ ಹಿನ್ನೆಲೆಯಲ್ಲಿ ಜಂಬೂಸವಾರಿಯನ್ನು ಸ್ಥಗಿತಗೊಳಿಸಿ ನಂತರ, ಶ್ರೀ ಚಾಮುಂಡೇಶ್ವರಿ ದೇವಿಯನ್ನು ಬೆಳ್ಳಿರಥದಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು.

ಪಟಾಕಿ, ವಾದ್ಯಗಳ ಸದ್ದು ಕೇಳಿದ ತಕ್ಷಣ ಆನೆಗಳು ಬೆದರಿದವು. ಗಾಬರಿಗೊಂಡ ಜನರು ಚೆಲ್ಲಾಪಿಲ್ಲಿಯಾಗಿ ಓಡಿದರು. ವಾದ್ಯ, ತಮಟೆ ಸದ್ದನ್ನು ನಿಲ್ಲಿಸಿದ ತಕ್ಷಣ ಆನೆಗಳು ಸಮಾಧಾನದಿಂದ ನಿಂತುಕೊಂಡವು. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಜಂಬೂಸವಾರಿಯನ್ನು ಸ್ಥಗಿತಗೊಳಿಸಿ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಬೆಳ್ಳಿರಥದಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ನಂತರ, ಕಲಾತಂಡಗಳ ಸಮೇತ ಮೆರವಣಿಗೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣವನ್ನು ಸಾಂಗವಾಗಿ ತಲುಪಿತು.

ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೊರೋನ ಹಿನ್ನೆಲೆಯಲ್ಲಿ ಈ ಬಾರಿಯೂ ಸಾಂಪ್ರದಾಯಿಕವಾಗಿ ಶ್ರೀರಂಗಪಟ್ಟಣ ದಸರಾವನ್ನು ಆಚರಿಸಲಾಗುತ್ತಿದೆ. ಶ್ರೀ ತಾಯಿ ಚಾಮುಂಡೇಶ್ವರಿ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು.

 ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್‍ಗೌಡ, ಮಳವಳ್ಳಿ ಶಾಸಕ ಡಾ.ಅನ್ನದಾನಿ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಒ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಅಪರ ಜಿಲ್ಲಾಧಿಕಾರಿ ಶೈಲಜಾ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಶ್ವೇತಾ, ಹಾಗೂ ಮತ್ತಿತರರು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News