ಶಶಿಕಲಾ ನಟರಾಜನ್‍ಗೆ ವಿಶೇಷ ಆತಿಥ್ಯ ಆರೋಪ: ತನಿಖಾ ವರದಿ ಸಲ್ಲಿಸಲು ಕಾಲಾವಕಾಶ ನೀಡಿದ ಹೈಕೋರ್ಟ್

Update: 2021-10-09 15:22 GMT
File Photo: PTI

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‍ಗೆ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿ ವಿಶೇಷ ಆತಿಥ್ಯ ನೀಡಲು ಕಾರಾಗೃಹ ಅಧಿಕಾರಿಗಳು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಮತ್ತೆ ಎರಡು ವಾರ ಕಾಲಾವಕಾಶ ನೀಡಿದೆ.

ಪ್ರಕರಣದ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತೆ ಕೆ.ಎಸ್.ಗೀತಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸರಕಾರಕ್ಕೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

ಪ್ರಕರಣದ ತನಿಖೆಯನ್ನು ಮುಂದಿನ ಒಂದು ತಿಂಗಳಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು. ತಪ್ಪಿದರೆ ಮುಂದಿನ ವಿಚಾರಣೆಗೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು 2021ರ ಸೆ.7ರಂದು ಹೈಕೋರ್ಟ್ ತಾಕೀತು ಮಾಡಿತ್ತು. ಅದರಂತೆ ಅರ್ಜಿ ವಿಚಾರಣೆಗೆ ಬಂದಾಗ ಸರಕಾರದ ಪರ ವಕೀಲ ವಿ.ಶ್ರೀನಿಧಿ ಹಾಜರಾಗಿ, ಇಂದಿನ ವಿಚಾರಣೆಗೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಹಾಜರಾಗಬೇಕಿತ್ತು. ಆದರೆ, ವೈಯಕ್ತಿಕ ಕಾರಣದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ಪೀಠ, ಅರ್ಜಿ ಸಂಬಂಧ 2021ರ ಸೆ.7ರಂದು ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಎರಡು ವಾರದಲ್ಲಿ ಪಾಲಿಸಬೇಕು ಎಂದು ಸರಕಾರಿ ವಕೀಲರಿಗೆ ಸೂಚಿಸಿತು.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ಜೈಲು ಅಧಿಕಾರಿಗಳಿಗೆ ಕೋಟ್ಯಂತರ ಹಣ ನೀಡಿದ ಭ್ರಷ್ಟಾಚಾರ ಆರೋಪವೂ ಇತ್ತು. ಈ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ 295 ಪುಟಗಳ ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಅಂತಿಮ ವರದಿ ಸಲ್ಲಿಸಿಲ್ಲ. ಹೀಗಾಗಿ, ಅಂತಿಮ ವರದಿ ಸಲ್ಲಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News