×
Ad

ಮೂರನೇ ದಿನವೂ ಮುಂದುವರೆದ ಐಟಿ ದಾಳಿ: ಬಿ.ವೈ.ವಿಜಯೇಂದ್ರ ಆಪ್ತರ ಮನೆಯಲ್ಲಿ ಶೋಧ

Update: 2021-10-09 21:21 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.9: ಆದಾಯ ತೆರಿಗೆ ಅಧಿಕಾರಿಗಳು ಸತತ ಮೂರನೆ ದಿನವೂ ದಾಳಿ ಮುಂದುವರೆಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ಆಪ್ತರ ಮನೆಯಲ್ಲಿ ಶೋಧ ಕಾರ್ಯ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಅರವಿಂದ್ ಹಾಗೂ ಈಗಾಗಲೇ ದಾಳಿಗೆ ಒಳಗಾಗಿರುವ ಯಡಿಯೂರಪ್ಪ ಅವರ ಆಪ್ತ ಸಹಾಯಕ ಉಮೇಶ್, ಮತ್ತೋರ್ವ ಗುತ್ತಿಗೆದಾರ ಸೋಮಶೇಖರ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಯಿತು.

ಮುಖ್ಯವಾಗಿ ಅರವಿಂದ್ ಅವರು ವಿಜಯೇಂದ್ರ ಅವರ ವ್ಯಾಪಾರ ವಹಿವಾಟು ಸೇರಿದಂತೆ ಅವರ ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಮುಖ ಇಲಾಖೆಯ ಕಡತಗಳು, ಬ್ಯಾಂಕ್ ವಹಿವಾಟಿನ ದಾಖಲೆಗಳು, ಹಾರ್ಡ್ ಡಿಸ್ಕ್, ಕಂಪ್ಯೂಟರ್, ವಿವಿಧೆಡೆ ಖರೀದಿಸಿರುವ ಜಮೀನು, ಫ್ಲಾಟ್ ಸೇರಿದಂತೆ ಮತ್ತಿತರ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿ.ಎಸ್.ಯಡಿಯೂರಪ್ಪನವರ ಆಪ್ತಸಹಾಯಕ ಉಮೇಶನ ಆಪ್ತ, ಕ್ಲಾಸ್ ಒನ್ ಗುತ್ತಿಗೆದಾರ ಸೋಮಶೇಖರ್ ಕಚೇರಿ ಮತ್ತು ನಿವಾಸದ ಮೇಲೆ ಶನಿವಾರ ದಾಳಿ ನಡೆಸಲಾಗಿದೆ. ಉಮೇಶ ಸೋಮಶೇಖರ್‍ನ ವ್ಯಾಪಾರ, ವಹಿವಾಟು ಹಾಗೂ ಪ್ರಮುಖವಾಗಿ ಎರಡು ಇಲಾಖೆಗಳ ವಹಿವಾಟನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ನೋಟಿಸ್ ನೀಡುವ ಸಾಧ್ಯತೆ?
ಐಟಿ ದಾಳಿಗೆ ಒಳಗಾಗಿರುವ ಉಮೇಶ, ಅರವಿಂದ, ಸೋಮಶೇಖರ್, ಗುತ್ತಿಗೆದಾರರು, ಲೆಕ್ಕ ಪರಿಶೋಧಕರು ಸೇರಿದಂತೆ ಮತ್ತಿತರರಿಗೆ ವಿಚಾರಣೆಗೆ ಹಾಜರಾಗಲು ಯಾವುದೇ ಸಂದರ್ಭದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆಯಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News