ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ: ಸಿದ್ದರಾಮಯ್ಯ ಆತಂಕ

Update: 2021-10-09 17:58 GMT

ಮೈಸೂರು: ಇಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯ ಎದುರಾಗಿದ್ದು, ಕೇಂದ್ರ ಸರಕಾರದ ವಿರುದ್ಧ ಟೀಕೆ ಮಾಡುವ ಸಾಹಿತಿಗಳನ್ನು ದೇಶ ದ್ರೋಹಿಗಳು ಎಂದು ಪಟ್ಟ ಕಟ್ವಲಾಗುತ್ತಿದೆ. ಇದು ಸಮಾಜಕ್ಕೆ ಅಪಾಯಕಾರಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಶನಿವಾರ ಪ್ರೊ.ಎಚ್.ಜೆ.ಲಕ್ಕಪ್ಪಗೌಡ ಅವರಿಗೆ ನುಡಿನಮನ ಕಾರ್ಯಕ್ರಮ, ಲಕ್ಕಪ್ಪಗೌಡ ಬದುಕು-ಬರಹ ಒಂದು ಮೆಲುಕು ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿಡಕ್ಕೆ ನೀರೆರೆದು, ಲಕ್ಕಪ್ಪಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದರು.

ಸಮಾಜದಲ್ಲಿ ಹೊಗಳಿಕೆ ತೆಗಳಿಕೆ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಹಜ, ತೆಗಳಿಕೆಯನ್ನು ಸಕಾರಾತ್ಮಕವಾಗಿ ನೋಡಬೇಕು. ಆದರೆ ಕೇಂದ್ರದ ಮೋದಿ ಸರಕಾರ ಟೀಕೆ ಮಾಡುವವರನ್ನು ದೇಶದ್ರೋಹಿಗಳು ಎಂದು ನೋಡುತ್ತಿದೆ. ಸರಕಾರವನ್ನು ಟೀಕಿಸುವ ಸಾಹಿತಿಗಳು ಮತ್ತು ಇತರ ಬುದ್ಧಿಜೀವಿಗಳನ್ನು ದೇಶದ್ರೋಹಿಗಳು ಎಂಬ ಪಟ್ಟಕಟ್ಟಲಾಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯಕಾರಿ ಎಂದು ಹೇಳಿದರು.

ಸಮಾಜದಲ್ಲಿ ಯಾವುದೇ ಟೀಕೆಗಳು ಅರ್ಥಪೂರ್ಣವಾಗಿ ಮತ್ತು ವಾಸ್ತವತೆಯಿಂದ ಕೂಡಿರಬೇಕು. ಆದರೆ ಕೆಲವರು ಬೇಕಂತಲೇ ಟೀಕೆಗಳನ್ನು ಮಾಡುತ್ತಿರುತ್ತಾರೆ. ಇದು ಸಮಾಜಕ್ಕೆ ಅಪಾಯಕಾರಿ. ನಾನು ಆಧಾರ ಇಲ್ಲದೆ ಯಾರನ್ನೂ ಟೀಕೆ ಮಾಡುವುದಿಲ್ಲ. ಅಂಕಿ ಅಂಶಗಳನ್ನು ಇಟ್ಟುಕೊಂಡೇ ಟೀಕೆ ಮಾಡುತ್ತೇನೆ. ಆದರೆ ಕೆಲವರು ಬೇಕಂತಲೇ ಟೀಕೆಗಳನ್ನು ಮಾಡುತ್ತಿರುತ್ತಾರೆ ಎಂದರು.

ಲಕ್ಕಪ್ಪಗೌಡರಿಗೂ ನನಗೂ ಬಹಳ ಒಡನಾಟ. ರಾಜಕೀಯಕ್ಕೆ ಬಂದಾಗನಿಂದಲೂ ಅವರ ಜೊತೆ ಒಡನಾಟ ಇದೆ. ಅವರು ಅಜಾತಶತ್ರು ಎಂದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಹಿ.ಶಿ.ರಾಮಚಂದ್ರೇಗೌಡ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್, ಶಾಸಕ ಎಚ್.ಪಿ.ಮಂಜುನಾಥ್, ಮಾನಸ, ಡಾ.ಬಾಲಾಜಿ, ಪ್ರೊ.ಎಚ್.ಜೆ.ಲಕ್ಕಪ್ಪಗೌಡ ಅವರ ಅಳಿಯ ದಿನೇಶ್, ಕ್ಯಾತನಹಳ್ಳಿ ಪ್ರಕಾಶ್, ಕಾ.ತಾ.ಚಿಕ್ಕಣ್ಣ, ಲಕ್ಕಪ್ಪಗೌಡ ಅವರ ಪತ್ನಿ ಕಮಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News