×
Ad

ಕಲ್ಲಿದ್ದಲು ಸಮಸ್ಯೆಗೆ ಒಂದೆರಡು ದಿನಗಳಲ್ಲಿ ಪರಿಹಾರ: ಸಚಿವ ಸುನೀಲ್ ಕುಮಾರ್

Update: 2021-10-11 17:46 IST

ಬೆಂಗಳೂರು, ಅ. 11: `ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಉಂಟಾಗಿರುವ ಕಲ್ಲಿದ್ದಲು ಕೊರತೆಯ ಸಮಸ್ಯೆ ಇನ್ನೂ ಒಂದು ಅಥವಾ ಎರಡು ದಿನಗಳಲ್ಲಿ ಪರಿಹಾರವಾಗಲಿದೆ. ಹೀಗಾಗಿ ಯಾವುದೇ ರೀತಿಯಲ್ಲಿಯೂ ಆತಂಕಪಡುವ ಅಗತ್ಯವಿಲ್ಲ' ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕೆಪಿಟಿಸಿಎಲ್ ಕಚೇರಿಯಲ್ಲಿ ಕಿರಿಯ ಪವರ್ ಮ್ಯಾನ್‍ಗಳಿಗೆ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಓರಿಸ್ಸಾದ ಮಹಾನಂದಿ ಗಣಿಯಿಂದ ಕಲ್ಲಿದ್ದಲು ತುಂಬಿಕೊಂಡು ಹೊರಟಿರುವ ಒಂದು ರೇಕ್ ಮಂಗಳವಾರ ರಾಜ್ಯಕ್ಕೆ ತಲುಪಲಿದ್ದು, ಮತ್ತೊಂದು ರೇಕ್ ಬುಧವಾರ ಬರಲಿದೆ. ಇದರಿಂದ ರಾಜ್ಯದಲ್ಲಿನ ಕಲ್ಲಿದ್ದಲು ಸಮಸ್ಯೆಗೆ ಪರಿಹಾರ ದೊರೆಯಲಿದೆ' ಎಂದು ತಿಳಿಸಿದರು.

`ಹತ್ತು ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದ್ದು, ಇದೀಗ ಅದನ್ನು 14 ರೇಕ್‍ಗಳಿಗೆ ಹೆಚ್ಚಿಸಲು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಲಾಗಿದೆ. ಎರಡು ರೇಕ್ ತಕ್ಷಣ ಬರಲಿದ್ದು, ಇನ್ನೆರಡು ರೇಕ್‍ಗಳನ್ನು ನವೆಂಬರ್ ತಿಂಗಳಲ್ಲಿ ನೀಡುವಂತೆ ಮನವಿ ಮಾಡಲಾಗಿದೆ' ಎಂದು ಸುನೀಲ್ ಕುಮಾರ್ ಮಾಹಿತಿ ನೀಡಿದರು.

`ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದ ಸಮಸ್ಯೆ ಆಗಬಹುದು ಎಂಬ ಆತಂಕವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೊಸದಿಲ್ಲಿಗೆ ತೆರಳಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ, ರಾಜ್ಯಕ್ಕೆ ತ್ವರಿತವಾಗಿ ಸ್ಪಂದಿಸಿದೆ. ಕೆಲವು ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯ ಅವಧಿಯನ್ನು ಕಡಿಮೆ ಮಾಡಲಾಗಿತ್ತು. ಯಾವುದೇ ಉಷ್ಣ ವಿದ್ಯುತ್ ಸ್ಥಾವರದಲ್ಲೂ ಉತ್ಪಾದನೆ ಸಂಪೂರ್ಣ ಸ್ಥಗಿತವಾಗಿರಲಿಲ್ಲ' ಎಂದು ಸುನೀಲ್ ಕುಮಾರ್ ಸ್ಪಷ್ಟಣೆ ನೀಡಿದರು.

`ಮಹಾರಾಷ್ಟ್ರದ ಮಂದಾಕಿನಿ ಮತ್ತು ಬಾರಂಜಿಯಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿರುವ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಆರಂಭಿಸಲು ಅರಣ್ಯ ಇಲಾಖೆಯ ಅನುಮತಿ ಬೇಕಿದೆ. ಅದನ್ನು ಕೊಡಿಸುವಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಮಾಡಲಾಗಿದೆ. ಅನುಮತಿ ದೊರತರೆ ಕಲ್ಲಿದ್ದಲು ತೆಗೆಯಲು ಅಗತ್ಯವಿರುವ ಕ್ರಮಗಳನ್ನು ರಾಜ್ಯ ಸರಕಾರ ವಹಿಸಲಿದೆ ಎಂದು ಸಚಿವ ಸುನೀಲ್ ಕುಮಾರ್ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News