×
Ad

ರಾಜ್ಯ ಕತ್ತಲಲ್ಲಿ ಮುಳುಗುವುದು ನಿಶ್ಚಿತ: ದಿನೇಶ್ ಗುಂಡೂರಾವ್ ಎಚ್ಚರಿಕೆ

Update: 2021-10-11 18:04 IST

ಬೆಂಗಳೂರು, ಅ. 11: `ದೇಶದೆಲ್ಲೆಡೆ ಏಕಾಏಕಿ ಕಲ್ಲಿದ್ದಲು ಕೊರತೆ ಉಂಟಾಗಿರುವುದು ಆಶ್ಚರ್ಯಕರ. ಕಲ್ಲಿದ್ದಿಲಿನ ಅಭಾವ ರಾಜ್ಯದ ಮೇಲೂ ತಟ್ಟಿದೆ. ರಾಜ್ಯದ 3 ವಿದ್ಯುತ್ ಕೇಂದ್ರಗಳು ಅವಲಂಬಿತವಾಗಿರುವುದು ಕಲ್ಲಿದ್ದಿಲಿನ ಮೇಲೆ. ಈ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಿಲು ಪೂರೈಕೆಯಾಗದಿದ್ದರೆ, ಉತ್ಪಾದನೆ ಸ್ಥಗಿತಗೊಳ್ಳಲಿದೆ. ಆಗ ರಾಜ್ಯ ಕತ್ತಲಲ್ಲಿ ಮುಳುಗುವುದು ನಿಶ್ಚಿತ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿನಗರ ಕ್ಷೇತ್ರದ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ರಾಜ್ಯ ಸರಕಾರ ತನಗೆಷ್ಟು ಕಲ್ಲಿದ್ದಲು ಬೇಕು ಎಂದು ಅಂದಾಜಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಈಗ ಕಲ್ಲಿದ್ದಿಲು ಪೂರೈಕೆ ಮಾಡುವಂತೆ ಕೇಂದ್ರಕ್ಕೆ ದುಂಬಾಲು ಬೀಳುತ್ತಿದೆ. ಈ ಕೆಲಸ ಮೊದಲೇ ಮಾಡಬೇಕಿತ್ತಲ್ಲವೆ? ಮಳೆಗಾಲ ಮುಗಿಯುವ ಹಂತದಲ್ಲಿ ಇವರಿಗೆ ಜ್ಞಾನದೋಯವಾಯಿತೆ?' ಎಂದು ಟೀಕಿಸಿದ್ದಾರೆ.

`ಪರಿಸರ ಮಾಲಿನ್ಯಕ್ಕೆ ಕಲ್ಲಿದ್ದಿಲಿನ ಅತಿಯಾದ ಬಳಕೆಯೂ ಒಂದು ಕಾರಣ. ಆದರೆ, ಪರ್ಯಾಯ ವ್ಯವಸ್ಥೆಯಿಲ್ಲದೆ ಕಲ್ಲಿದ್ದಿಲಿನ ಬಳಕೆಯನ್ನು ಏಕಾಏಕಿ ಕಡಿಮೆ ಮಾಡಲು ಸಾಧ್ಯವಿಲ್ಲ. ರಾಜ್ಯ ಸರಕಾರ ಈ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿ, ಕಲ್ಲಿದ್ದಿಲಿನ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಬೇಸಗೆಯಲ್ಲಿ ಇಡೀ ರಾಜ್ಯವೇ ತತ್ತರಿಸಿ ಹೋಗಲಿದೆ' ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.

`ಮಳೆಗಾಲ ಮುಗಿಯುವ ಹಂತದಲ್ಲಿರುವಾಗ ಜಲ ವಿದ್ಯುತ್ ಮೇಲೆ ಹೆಚ್ಚು ಅವಲಂಬನೆ ಸಾಧ್ಯವಿಲ್ಲ. ಜಲಾಶಯಗಳಲ್ಲಿ ಒಳಹರಿವು ಕಡಿಮೆಯಾದಂತೆ ವಿದ್ಯುತ್ ಉತ್ಪಾದನೆಯೂ ಕುಸಿಯಲಿದೆ. ಆಗ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳೇ ಆಧಾರ. ವಿದ್ಯುತ್ ಉತ್ಪಾದನೆ ಗಂಭೀರ ಸಮಸ್ಯೆಯಾಗುವ ಮೊದಲೇ ಸರಕಾರ ಎಚ್ಚೆತ್ತುಕೊಳ್ಳಬೇಕು. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತಾಗಬಾರದು' ಎಂದು ದಿನೇಶ್ ಗುಂಡೂರಾವ್ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News