×
Ad

ಅದಾನಿ, ಅಂಬಾನಿ ಬೆಳೆಯಬೇಕು, ಬಡವರು ಸಾಯಬೇಕೆಂಬುದು ಬಿಜೆಪಿ ನೀತಿ: ಸಿದ್ದರಾಮಯ್ಯ

Update: 2021-10-11 18:15 IST

ಬೆಂಗಳೂರು, ಅ. 11: `ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು. ಕರ್ನಾಟಕದಲ್ಲಿ ಈವರೆಗೆ ವಿದ್ಯುತ್ ಅಭಾವ ಇರಲಿಲ್ಲ, ಯಾವಾಗಲೂ ವಿದ್ಯುತ್ ಉತ್ಪಾದನೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿತ್ತು. ನಮ್ಮಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿರುವುದರಿಂದ ನಮ್ಮ ರಾಜ್ಯಕ್ಕೆ ಕಲ್ಲಿದ್ದಲಿನ ಅಗತ್ಯ ಹೆಚ್ಚಿಲ್ಲ. ಸರಕಾರ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿ ಮಾಡಬಾರದು. ಹಾಗೇನಾದರೂ ಸರಕಾರ ಮಾಡಿದರೆ ನಾನು ಅದನ್ನು ಖಂಡಿಸುತ್ತೇನೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ವಿದ್ಯುತ್ ಘಟಕಗಳನ್ನು ಖಾಸಗಿಕರಣ ಮಾಡಬಾರದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಒಮ್ಮೆ ಖಾಸಗಿಕರಣಗೊಂಡರೆ ರೈತರಿಗೆ ಪೂರೈಕೆಯಾಗುತ್ತಿರುವ ಉಚಿತ ವಿದ್ಯುತ್ ಅನ್ನು ನಿಲ್ಲಿಸುತ್ತಾರೆ. ದೇಶಭಕ್ತರ ಸರಕಾರ ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕಾಗಿ ಕಿತ್ತಾಟ ಮಾಡುತ್ತಿದೆ. ಇದು ಲಾಭದಾಯಕ ಸ್ಥಾನವಾಗಿರುವುದರಿಂದ ಇಷ್ಟೆಲ್ಲಾ ಗಲಾಟೆಗಳಾಗುತ್ತಿದೆ' ಎಂದು ವಾಗ್ದಾಳಿ ನಡೆಸಿದರು.

`ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಪರಿಹಾರ, ನಮ್ಮ ತೆರಿಗೆ ಪಾಲಿನ ಹಣವನ್ನು ರಾಜ್ಯ ಸರಕಾರ ಗಟ್ಟಿಧ್ವನಿಯಲ್ಲಿ ಕೇಳಬೇಕು. ಇದೇನು ಭಿಕ್ಷೆಯಲ್ಲ, ನಮ್ಮ ಹಕ್ಕು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಆಗುತ್ತಿದೆ. ಎಪ್ರಿಲ್‍ನಿಂದ ಸೆಪ್ಟೆಂಬರ್ ವರೆಗೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 3ಸಾವಿರ ಕೋಟಿ ರೂಪಾಯಿ ತೆರಿಗೆ ಹೆಚ್ಚು ಸಂಗ್ರಹವಾಗಿದೆ. ಸ್ಟಾಲಿನ್ ಸರಕಾರ ಮೂರು ರೂಪಾಯಿ ತೆರಿಗೆ ಕಡಿಮೆ ಮಾಡಿದೆ, ನಮ್ಮ ರಾಜ್ಯದಲ್ಲಿ ಕನಿಷ್ಠ ಹತ್ತು ರೂಪಾಯಿ ಕಡಿಮೆ ಮಾಡಬೇಕು. ಆಗ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ' ಎಂದು ಸಿದ್ದರಾಮಯ್ಯ ಸಲಹೆ ಮಾಡಿದರು. 

`ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿಮೆ ಮಾಡಬೇಕು. ಏಳು ವರ್ಷದಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಒಂದರಿಂದಲೇ ಕೇಂದ್ರ ಸರಕಾರಕ್ಕೆ 23 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಕರ್ನಾಟಕವೊಂದರಿಂದಲೇ 1.20 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಬಡವರ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಬಿಜೆಪಿಯವರು ತೆರಿಗೆ ಕಡಿತ ಮಾಡಿ ಜನರಿಗೆ ಸಹಾಯ ಮಾಡಲಿ' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

`ಮನಮೋಹನ್ ಸಿಂಗ್ ಅವರ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಡೀಸೆಲ್ ಮೇಲೆ 3.45 ರೂ.ಅಬಕಾರಿ ತೆರಿಗೆ ಇತ್ತು, ಈಗ ಅದು 31.84 ರೂ.ಗಳಾಗಿದೆ. ಪೆಟ್ರೋಲ್ ಮೇಲೆ 9.21 ರೂ.ಗಳು ಇತ್ತು, ಈಗ 32.98 ರೂ.ಗೆ ಏರಿದೆ. ಇದರಲ್ಲಿ ಕನಿಷ್ಠ ಶೇ.50ರಷ್ಟು ಕಡಿಮೆ ಮಾಡಲಿ. ಇದನ್ನೇ ನಾನು ಕ್ರಿಮಿನಲ್ ಲೂಟಿ ಎಂದು ಕರೆದಿದ್ದು' ಎಂದು ಸಿದ್ದರಾಮಯ್ಯ ತಿಳಿಸಿದರು.

`ಕೋವಿಡ್‍ಗೂ ಪೆಟ್ರೋಲ್ ಬೆಲೆ ಏರಿಕೆಗೂ ಸಂಬಂಧ ಏನು? ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ಬಡ ಜನರ ರಕ್ತ ಕುಡಿಯುವುದು ಸರಿನಾ? ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹೆಚ್ಚು ಮಾಡಲಿ. ಕೊರೋನ ಇದ್ದರೂ ಅದಾನಿ ಆಸ್ತಿ ನಾಲ್ಕು ಪಟ್ಟು ಹೆಚ್ಚಾಗಿದೆ, ಬಡವರ ಬದುಕು ಬೀದಿಗೆ ಬರುತ್ತಿದೆ. ಹೀಗಿದ್ದಾಗ ಯಾರ ಮೇಲೆ ತೆರಿಗೆ ಹೆಚ್ಚು ಮಾಡಬೇಕು ಎಂದು ಸರಕಾರಕ್ಕೆ ಗೊತ್ತಾಗುವುದಿಲ್ಲವೇ? ಅದಾನಿ, ಅಂಬಾನಿ ಬೆಳೆಯಬೇಕು, ಬಡವರು ಸಾಯಬೇಕು, ಇದು ಬಿಜೆಪಿ ಅವರ ನೀತಿ' ಎಂದು ಸಿದ್ದರಾಮಯ್ಯ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News