×
Ad

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೇರಿ 7 ನ್ಯಾಯಾಧೀಶರ ವರ್ಗಾವಣೆ

Update: 2021-10-11 18:34 IST

ಬೆಂಗಳೂರು, ಅ.11: ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸಿನ ಮೇರೆಗೆ ಏಳು ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಗೆ ಕೇಂದ್ರ ಸರಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಹೈಕೋರ್ಟ್‍ನ ನ್ಯಾಯಮೂರ್ತಿ ಪಿ.ಬಿ.ಬಜಂತ್ರಿ ಅವರನ್ನು ಪಾಟ್ನಾ ಹೈಕೋರ್ಟ್‍ಗೆ ವರ್ಗಾಯಿಸಲಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ ನೇತೃತ್ವದ ಕೊಲಿಜಿಯಂ ಸೆ.21 ರಂದು ಈ ವರ್ಗಾವಣೆಗಳಿಗೆ ಶಿಫಾರಸು ಮಾಡಿತ್ತು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ನ್ಯಾಯಮೂರ್ತಿ ರಾಜನ್ ಗುಪ್ತಾ ಹಾಗೂ ರಾಜಸ್ಥಾನ ಹೈಕೋರ್ಟ್‍ನ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರನ್ನು ಪಾಟ್ನಾ ಹೈಕೋರ್ಟ್‍ಗೆ ವರ್ಗಾಯಿಸಲಾಗಿದೆ. ಈ ಮೂಲಕ ಇತ್ತೀಚೆಗಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾಟ್ನಾ ನ್ಯಾಯಾಲಯಕ್ಕೆ ಮೂವರು ಹೊಸ ನ್ಯಾಯಮೂರ್ತಿಗಳು ದೊರೆತಂತಾಗಿದೆ.

ಉಳಿದಂತೆ, ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಅವರನ್ನು ಮದ್ರಾಸ್ ಹೈಕೋರ್ಟ್‍ನಿಂದ ಕಲ್ಕತ್ತಾ ಹೈಕೋರ್ಟ್‍ಗೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ, ಹಿಮಾಚಲ ಪ್ರದೇಶ ಹೈಕೋರ್ಟ್‍ನ ನ್ಯಾಯಮೂರ್ತಿ ಸುರೇಶ್ವರ್ ಠಾಕೂರ್ ಅವರನ್ನು ಪಂಜಾಬ್ ಮತ್ತು ಹರಿಯಾಣಕ್ಕೆ, ತೆಲಂಗಾಣ ಹೈಕೋರ್ಟ್‍ನ ನ್ಯಾಯಮೂರ್ತಿ ಟಿ.ಅಮರನಾಥ ಗೌಡ್ ಅವರನ್ನು ತ್ರಿಪುರಾಕ್ಕೆ ಕಳುಹಿಸಲಾಗಿದೆ. ಅಲಹಾಬಾದ್ ಹೈಕೋರ್ಟ್‍ನ ನ್ಯಾಯಮೂರ್ತಿ ಸುಭಾಷ್ ಚಂದ್ ಅವರನ್ನು ಜಾರ್ಖಂಡ್ ಹೈಕೋರ್ಟ್‍ಗೆ ವರ್ಗಾಯಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News