×
Ad

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

Update: 2021-10-11 19:43 IST

ಚಿಕ್ಕಮಗಳೂರು, ಅ.11: ಹವಾಮಾನ ವೈಪರೀತ್ಯದಿಂದಾಗಿ ಕಳೆದ ಕೆಲ ದಿನಗಳಿಂದ ಕಾಫಿನಾಡಿನಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ಸೋಮವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಧಾರಾಕಾರವಾಗಿ ಸುರಿದಿದೆ. ಭಾರೀ ಮಳೆಯಿಂದಾಗಿ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಾಳೆಹೊನ್ನೂರು-ಕಳಸ ಸಂಪರ್ಕದ ರಸ್ತೆ ಮೇಲೆ ನೀರುನಿಂತ ಪರಿಣಾಮ ಕೆಲಹೊತ್ತು ವಾಹನ ಸಂಚಾರಕ್ಕೆ ತಡೆ ಬಿದ್ದಿತ್ತು.

ಜಿಲ್ಲೆಯ ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣ, ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿತ್ತು. ಆದರೆ ರವಿವಾರ ಸಂಜೆ ಮಲೆನಾಡು ಭಾಗದ ಅಲ್ಲಲ್ಲಿ ಧಾರಾಕಾರವಾಗಿ ಸುರಿದ ಮಳೆ ಸೋಮವಾರ ಬೆಳಗ್ಗೆ ಹಾಗೂ ಸಂಜೆ ಮತ್ತೆ ಆರ್ಭಟಿಸಿದೆ. ಜಿಲ್ಲೆಯ ಬಯಲು ಭಾಗದಲ್ಲೂ ಸೋಮವಾರ ಮಧ್ಯಾಹ್ನದ ವೇಳೆ ಧಾರಾಕಾರವಾಗಿ ಸುರಿಯಿತು.

ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ಬಳಿಕ ಮಲೆನಾಡಿನ ಮೂಡಿಗೆರೆ, ಶೃಂಗೇರಿ, ಕಳಸ, ಬಾಳೆಹೊನ್ನೂರು, ಕೊಪ್ಪ, ಎನ್.ಆರ್.ಪುರ, ಜಯಪುರ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. 

ಭಾರೀ ಮಳೆಗೆ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಾಳೆಹೊನ್ನೂರು-ಕಳಸ ಪಟ್ಟಣದ ರಸ್ತೆಯಲ್ಲಿರುವ ಮಹಲ್ಗೋಡು ಎಂಬಲ್ಲಿ ಹಳ್ಳದ ನೀರು ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸಂಚಾರ ಕೆಲಹೊತ್ತು ಸ್ತಬ್ಧಗೊಂಡಿತ್ತು. ಬೈಕ್ ಸವಾರನೋರ್ವ ಈ ರಸ್ತೆಯ ಮೇಲೆ ಹರಿಯುತ್ತಿದ್ದ ನೀರು ಲೆಕ್ಕಿಸದೇ ತೆರಳಿದ ಪರಿಣಾಮ ನೀರಿನ ರಭಸಕ್ಕೆ ಬೈಕ್ ಮೋರಿಗೆ ಢಿಕ್ಕಿಯಾಗಿ ಮುಂದಕ್ಕೂ ಹೋಗದೇ, ಹಿಂದಕ್ಕೂ ಬಾರದೇ ಬೈಕ್ ಸವಾರ ಅಪಾಯಕ್ಕೆ ಸಿಲುಕಿದ್ದ. ಈ ವೇಳೆ ಸ್ಥಳೀಯರು ಹಗ್ಗದ ಸಹಾಯದಿಂದ ಬೈಕ್ ಸವಾರನನ್ನು ರಕ್ಷಣೆ ಮಾಡಿದ್ದಾರೆ. ರಸ್ತೆ ಮೇಲೆ ಭಾರೀ ನೀರು ಹರಿಯುತ್ತಿದ್ದ ಪರಿಣಾಮ ರಸ್ತೆಯ ಎರಡೂ ಬದಿಯಲ್ಲಿ ಭಾರೀ ವಾಹನ ಜಮಾವಣೆಗೊಂಡು ಸುಮಾರು 1 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು.

ಚಿಕ್ಕಮಗಳೂರು ನಗರದಲ್ಲಿ ಮಧ್ಯಾಹ್ನ ದಿಢೀರ್ ಮಳೆ ಸುರಿದಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾದ ಪರಿಣಾಮ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಕೆಲ ಬಡಾವಣೆಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದ ಪರಿಣಾಮ ಕೆಲ ಮನೆಗಳಿಗೆ ಚರಂಡಿ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಗಿತ್ತು. ಜಿಲ್ಲೆಯ ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಕೆಲಕಾಲ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ. ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಪರಿಣಾಮ ಅಡಿಕೆ ಕೊಯ್ಲ ಚಟುವಟಿಕೆಗೆ ಭಾರೀ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News