1ರಿಂದ 5ನೆ ತರಗತಿವರೆಗೂ ಶಾಲೆ ಪುನಾರಂಭಕ್ಕೆ ಸಿದ್ಧತೆ: ಸಚಿವ ಬಿ.ಸಿ.ನಾಗೇಶ್

Update: 2021-10-11 16:44 GMT

ಬೆಂಗಳೂರು, ಅ.11: ಒಂದರಿಂದ 5ನೇ ತರಗತಿವರೆಗೆ ಶಾಲೆ ಪುನಾರಂಭದ ಜೊತೆಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಪೂರ್ಣವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಯಲಿದ್ದು, ಆ ಸಮಿತಿ ಒಪ್ಪಿಗೆ ಪಡೆದು ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು. ಇನ್ನು, ಅ.20ರವರೆಗೆ ರಜೆಯಿದ್ದು, ಅ.21ರಿಂದ ಅನುಮತಿ ದೊರೆತರೆ ಶಾಲೆ ಪ್ರಾರಂಭಿಸಲಾಗುವುದು ಎಂದರು. 

ಈಗಾಗಲೇ 6ರಿಂದ 12ನೇ ತರಗತಿವರೆಗೆ ಶಾಲಾ-ಕಾಲೇಜು ಆರಂಭವಾಗಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಪ್ರಮಾಣ ಶೇ.90ರಷ್ಟಿದೆ ಎಂದ ಅವರು, ಶಾಲೆ ಆರಂಭಕ್ಕೆ ಶೌಚಾಲಯದ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನುಡಿದರು.

ಪಠ್ಯಪುಸ್ತಕದಲ್ಲಿನ ದೋಷಗಳ ಬಗ್ಗೆ ದೂರುಗಳು ಬಂದಿರುವುದರಿಂದ ಸಮಿತಿ ರಚಿಸಲಾಗಿದೆ. ದೋಷಗಳನ್ನು ಸರಿಪಡಿಸುವ ಬಗ್ಗೆ ಆ ಸಮಿತಿ ಪರಾಮರ್ಶೆ ಮಾಡಲಿದೆ. ಅದೇ ರೀತಿ, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕಾಯ್ದೆ ಪ್ರಕಾರ ಸದ್ಯದಲ್ಲೇ ಅಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News