×
Ad

ಮಡಿಕೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಿಕೆ: ಬಿಜೆಪಿಯಿಂದ ವಿರೋಧ

Update: 2021-10-11 22:39 IST

ಮಡಿಕೇರಿ ಅ.11 : ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದು ನಗರಸಭಾ ಅಧ್ಯಕ್ಷರಾಗಿ ಬಿಜೆಪಿಯ ಅನಿತಾಪೂವಯ್ಯ ಹಾಗೂ ಉಪಾಧ್ಯಕ್ಷರಾಗಿ ಸವಿತಾ ರಾಕೇಶ್ ಅಧಿಕಾರ ಸ್ವೀಕರಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯೇ ಮುಂದೂಡಲ್ಪಟ್ಟಿದೆ.

 ನಗರಸಭೆಯಲ್ಲಿ ಬಿಜೆಪಿ 16, ಎಸ್‍ಡಿಪಿಐ 5, ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಸಂಖ್ಯಾ ಬಲವನ್ನು ಹೊಂದಿವೆ. ಅಧಿಕಾರ ಬಿಜೆಪಿ ಪಾಲಾಗುವುದು ನಿಶ್ಚಿತವಾಗಿದ್ದರೂ ಎಸ್‍ಡಿಪಿಐ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣೆ ನಡೆಸುವುದು ಅನಿವಾರ್ಯವಾಯಿತು.

ಆದರೆ ಮಧ್ಯಾಹ್ನ ಚುನಾವಣಾ ಪ್ರಕ್ರಿಯೆ ನಡೆಯುವ ಬದಲು ಇಂದಿನ ಪ್ರಕ್ರಿಯೆಯನ್ನು ರದ್ದುಪಡಿಸಿರುವುದಾಗಿ ಚುನಾವಣಾಧಿಕಾರಿಯಾಗಿರುವ  ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಘೋಷಿಸಿದರು. 

ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್ ನ ಶಾಂತೆಯಂಡ ವೀಣಾಅಚ್ಚಯ್ಯ ಅವರಿಗೆ ನಗರಸಭೆಯಲ್ಲಿ ಮತದಾನ ಮಾಡುವ ಹಕ್ಕಿದ್ದರೂ ಚುನಾವಣಾ ನೋಟಿಸ್ ನೀಡಿರಲಿಲ್ಲ. ಇದರಿಂದ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಂತ್ರಿಕ ತಪ್ಪಿನಿಂದಾಗಿ ವೀಣಾಅಚ್ಚಯ್ಯ ಅವರಿಗೆ ನೋಟಿಸ್ ಕಳುಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಇಂದಿನ ಎಲ್ಲಾ ಚುನಾವಣಾ ಪ್ರಕ್ರಿಯೆಗಳನ್ನು ರದ್ದುಗೊಳಿಸಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದರು.

ಆಯ್ಕೆ ಪ್ರಕ್ರಿಯೆ ರದ್ದು 

ಮೊದಲೇ ನಿಗಧಿಯಾಗಿದ್ದಂತೆ ಮಧ್ಯಾಹ್ನ 2 ಗಂಟೆಗೆ ಚುನಾವಣಾ ಪ್ರಕ್ರಿಯೆ ನಡೆಯುವ ಸಲುವಾಗಿ ಬಿಜೆಪಿ, ಜೆಡಿಎಸ್, ಕಾಂಗ್ರೇಸ್ ಮತ್ತು ಎಸ್‍ಡಿಪಿಐ ಸದಸ್ಯರು ಸಭೆಗೆ ಆಗಮಿಸಿದ್ದರು. ಸಭೆಯ ಆರಂಭದಲ್ಲಿ ಮಾತನಾಡಿದ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಅವರು, ಇಂದಿನ ಚುನಾವಣೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ಜಾರಿಯಾಗಿಲ್ಲ. ಇದಕ್ಕೆ ತಾಂತ್ರಿಕ ದೋಷ ಕಾರಣವಾಗಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆಯಂತೆ ಇಂದು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಾಧ್ಯವಿಲ್ಲ ಎಂದು ಘೋಷಿಸಿ, ಚುನಾವಣೆ ಮುಂದೂಡಿದರು. 

ಇದಕ್ಕೆ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸೇರಿದಂತೆ ಬಿಜೆಪಿಯ ಎಲ್ಲ 16 ಮಂದಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ತಪ್ಪಿಗೆ ತೇಪೆ ಹಚ್ಚಲು ಚುನಾವಣೆ ಮುಂದೂಡುವುದು ಸರಿಯಲ್ಲ. ಬಿಜೆಪಿಗೆ ಸಂಸದರು, ಇಬ್ಬರ ಶಾಸಕರ ಸಹಿತ 19 ಸ್ಪಷ್ಟ ಬಹುಮತವಿದೆ. ಈ ಕ್ಷಣವೇ ಚುನಾವಣೆ ನಡೆಸುವಂತೆ ಪಟ್ಟು ಹಿಡಿದರು. 

ಈ ಸಂದರ್ಭ ಮಧ್ಯ ಪ್ರವೇಶಿಸಿದ ಕಾಂಗ್ರೇಸ್ ಸದಸ್ಯ ರಾಜೇಶ್ ಯಲ್ಲಪ್ಪ, ವಿಧಾನ ಪರಿಷತ್ ಸದಸ್ಯರು ಕೂಡ ನಗರಸಭೆ ಮತದಾರರಾಗಿದ್ದಾರೆ. ಅವರಿಗೆ ನೋಟೀಸ್ ತಲುಪಿಸದೇ ಚುನಾವಣೆ ನಡೆಸುವುದು ಕಾನೂನು ಬಾಹಿರವಾಗಲಿದೆ. ಹೀಗಾಗಿ ಚುನಾವಣೆ ಮುಂದೂಡುವಂತೆ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಎಸ್‍ಡಿಪಿಐ ಸದಸ್ಯರು, ಬಿಜೆಪಿಯ ಒತ್ತಡಕ್ಕೆ ಮಣಿದು ಒಮ್ಮೆ ಮುಂದೂಡಿದ ಚುನಾವಣೆ ಪ್ರಕ್ರಿಯೆಯನ್ನು ರದ್ದು ಮಾಡುವಂತಿಲ್ಲ. ಹೀಗೆ ಮಾಡಿದಲ್ಲಿ ಪ್ರಜಾಪ್ರಭುತ್ವ ವಿರೋಧಿಯಾಗಲಿದೆ ಎಂದು ಹೇಳಿದರು. ಈ ಸಂದರ್ಭ ಸಭೆಯಲ್ಲಿ ತೀವ್ರ ಗದ್ದಲ ಏರ್ಪಟ್ಟಿತು. 

ಪೊಲೀಸರು ಪ್ರವೇಶಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ತೀವ್ರ ಆಕ್ರೋಷ ವ್ಯಕ್ತಪಡಿಸಿ ಪೊಲೀಸರು ಸಭೆಯಿಂದ ಹೊರ ಹೋಗಬೇಕು. ಇದು ಚುನಾವಣಾ ಪ್ರಕ್ರಿಯೆ ಆಗಿರುವ ಕಾರಣ ಪೊಲೀಸರು ಪ್ರವೇಶಿಸುವಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಸಭೆಯಿಂದ ಹೊರ ತೆರಳಿದರು. ಈ ಸಂದರ್ಭ ಚುನಾವಣಾಧಿಕಾರಿ ಈಶ್ವರ್ ಕುಮಾರ್ ನಮ್ಮ ಕಡೆಯಿಂದ ತಪ್ಪಾಗಿದೆ. ಆದರೆ ನೋಟೀಸ್ ಜಾರಿಯಾಗದೇ ಚುನಾವಣೆ ನಡೆಸಲು ಸಾಧ್ಯವಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೂ ವರದಿ ನೀಡಲಾಗುತ್ತದೆ. ಹೀಗಾಗಿ ಇಂದಿನ ಚುನಾವಣೆ ಮುಂದೂಡುವುದಾಗಿ ಘೋಷಿಸಿ ಸಭೆಯಿಂದ ಹೊರ ನಡೆದರು. ಚುನಾವಣಾಧಿಕಾರಿ ಸಭೆಯಿಂದ ಹೊರ ನಡೆಯುತ್ತಿದ್ದಂತೆಯೇ ಅವರ ವಿರುದ್ದ ಬಿಜೆಪಿ ಸದಸ್ಯರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಅಧಿಕಾರಿಗಳ ತಪ್ಪಿಗೆ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೇಸ್ ಸದಸ್ಯರಿಗೆ ನೋಟೀಸ್ ಜಾರಿಯಾಗದಿರುವುದಕ್ಕೆ ಚುನಾವಣಾ ಅಧಿಕಾರಿಗಳು ಕಾರಣ. ಅದು ಅವರ ತಪ್ಪು. ಏಕಾಏಕಿ ಚುನಾವಣೆ ರದ್ದು ಮಾಡಲು ಕಾನೂನಲ್ಲಿ ಅವಕಾಶ ಎಲ್ಲಿದೆ. ಅವರ ತಪ್ಪಿಗೆ ಇಡೀ ಚುನಾವಣೆಯನ್ನು ಮುಂದೂಡಿರುವುದು ನ್ಯಾಯ ಸಮ್ಮತವಲ್ಲ. ಚುನಾವಣಾಧಿಕಾರಿಗಳು ನಡೆದುಕೊಂಡ ರೀತಿಯೂ ಸರಿಯಲ್ಲ. ಬಿಜೆಪಿಗೆ 19 ವೋಟ್ ಬಲವಿದೆ. ವಿಪಕ್ಷಗಳಿಗೆ ಕೇವಲ 8 ವೋಟ್ ಇದೆ. ಈ ನಡೆಯನ್ನು ಬಿಜೆಪಿ ತೀವ್ರ ವಿರೋಧಿಸುತ್ತದೆ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗುತ್ತದೆ.

- ಪ್ರತಾಪ್ ಸಿಂಹ ಕೊಡಗು ಮೈಸೂರು ಸಂಸದ.

ನೋಟೀಸ್ ನೀಡದಿರುವುದು ಅಧಿಕಾರಿಗಳ ತಪ್ಪು. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಚುನಾವಣಾ ಪ್ರಕ್ರಿಯೆ ಮುಂದೂಡಿರುವುದು ಜನಪ್ರತಿನಿಧಿಗಳಿಗೆ ಮಾಡಿದ ಅವಮಾನ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾನೂನು ಹೋರಾಟದ ಕುರಿತು ಪಕ್ಷ ನಿರ್ಧಾರದಂತೆ ಕ್ರಮ ಕೈಗೊಳ್ಳುತ್ತೇವೆ.

- ಸುನಿಲ್ ಸುಬ್ರಮಣಿ ಎಂ.ಎಲ್.ಸಿ ಕೊಡಗು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News