ಸಹಕಾರಿ ಬ್ಯಾಂಕುಗಳನ್ನು ಕಾಪಾಡಿ

Update: 2021-10-12 05:50 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹಿಂದೆ ಒಂದು ಕಾಲವಿತ್ತು. ಶಾಸನ ಸಭೆಗಳಿಗೆ ಚುನಾಯಿತರಾಗಿ ಹೋಗುವವರು ಕೊನೆಯುಸಿರು ಇರುವವರೆಗೆ ಜನಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದ್ದರು. ಸಾಲ ಮಾಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಶಾಂತವೇರಿ ಗೋಪಾಲಗೌಡರಂತಹ ಕೆಲವು ಹೋರಾಟಗಾರರಿಗೆ ಜನಸಾಮಾನ್ಯರೇ ಚುನಾವಣಾ ಖರ್ಚಿಗೆ ನಿಧಿ ಸಂಗ್ರಹಿಸಿ ಕೊಡುತ್ತಿದ್ದರು. ಬಹುತೇಕ ಶಾಸಕರು ಸಾಲದಲ್ಲೇ ಮುಳುಗಿರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಈಗಿನ ಶಾಸಕರು ಸಕ್ಕರೆ ಕಾರ್ಖಾನೆಯ ಒಡೆತನವನ್ನು ಹೊಂದಿದ್ದಾರೆ. ತಮ್ಮದೇ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಶಾಸನ ಸಭೆಗಳನ್ನು ಪ್ರವೇಶಿಸಿದ್ದಾರೆ. ಇಷ್ಟೇ ಆಗಿದ್ದರೆ ವಿಶೇಷವಲ್ಲ, ಸಕ್ಕರೆ ಕಾರ್ಖಾನೆ ಮಾಲಕತ್ವ ಹೊಂದಿರುವ ಕೆಲ ಶಾಸಕರು ಸಹಕಾರಿ ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲವನ್ನು ಪಡೆದು ಬಾಕಿ ಉಳಿಸಿಕೊಂಡ ಸಂಗತಿ ಬಯಲಿಗೆ ಬಂದಿದೆ. ಇದು ಯಾರೋ ವಿರೋಧ ಪಕ್ಷದವರು ಮಾಡಿರುವ ಆರೋಪವಲ್ಲ. ಸಹಕಾರ ಸಚಿವರೇ ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಇದಕ್ಕಿಂತ ಆತಂಕದ ಸಂಗತಿ ಇನ್ನೊಂದಿಲ್ಲ.

 ಉತ್ತರ ಕರ್ನಾಟಕ ಭಾಗದ ಪ್ರಭಾವಿ ಶಾಸಕರೊಬ್ಬರು ಇಂತಹ ವ್ಯವಹಾರದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಅಪೆಕ್ಸ್ ಬ್ಯಾಂಕ್ ಮತ್ತು ಬೆಳಗಾವಿ ಹಾಗೂ ಕಾರವಾರ ಡಿಸಿಸಿ ಬ್ಯಾಂಕುಗಳಿಂದ ಸುಮಾರು 250 ಕೋಟಿ ರೂ. ಸಾಲ ಪಡೆದು ಸಕಾಲದಲ್ಲಿ ಸಾಲ ತೀರಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಸಚಿವರು ಸದನದಲ್ಲಿ ಹೇಳಿದ್ದಾರೆ. ಹೀಗಾಗಿ ಹಲವಾರು ಸಹಕಾರಿ ಬ್ಯಾಂಕುಗಳು ದಿವಾಳಿಯ ಅಂಚಿಗೆ ಬಂದು ನಿಂತಿರುವುದು ಸಚಿವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ.

ನಾಡಿಗೆ ಅನ್ನ ಹಾಕುವ ರೈತರು ಮಳೆಯಾಗದೆ ಬೆಳೆ ಕೈ ಕೊಟ್ಟು ಸಕಾಲದಲ್ಲಿ ಸಾಲದ ಕಂತುಗಳನ್ನು ಕಟ್ಟಲಾಗದಿದ್ದರೆ ದಂಡ ಹಾಕುವ, ಡಂಗುರ ಸಾರುವ ಹಾಗೂ ಮನೆಯೊಳಗೆ ನುಗ್ಗಿ ಪಾತ್ರೆ ಮತ್ತಿತರ ವಸ್ತುಗಳನ್ನು ಜಪ್ತ್ತಿ ಮಾಡಿಕೊಂಡು ಹೋಗುವ, ರೈತರ ಆಸ್ತಿಯನ್ನು ಹರಾಜು ಹಾಕುವ ಸಹಕಾರಿ ಬ್ಯಾಂಕುಗಳು ನೂರಾರು ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ವತಃ ಸಚಿವರೇ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಇದು ನಮ್ಮ ರಾಜ್ಯದ ಮಾತ್ರವಲ್ಲ ದೇಶದ ಸಹಕಾರ ಕ್ಷೇತ್ರದ ಪರಿಸ್ಥಿತಿ.

ಸಹಕಾರಿ ಬ್ಯಾಂಕುಗಳಿಗೆ ಕೆಲ ಶಾಸಕರ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಸಂಗತಿಯನ್ನು ಸದನದಲ್ಲಿ ಪ್ರಕಟಿಸಿದರಾದರೂ ಆ ಶಾಸಕರ ಹೆಸರನ್ನು ಬಹಿರಂಗ ಪಡಿಸಲು ಹಿಂಜರಿದಿದ್ದಾರೆ. ಸಚಿವರ ಬಾಯಿಗೆ ಬೀಗ ಹಾಕುವಷ್ಟು ಸಕ್ಕರೆ ಲಾಬಿ ಪ್ರಬಲವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಸಚಿವರು ಸುಸ್ತಿದಾರ ಶಾಸಕರ ಹೆಸರನ್ನು ಹೇಳದಿದ್ದರೂ ಅವರು ಯಾರೆಂದು ಯಾರು ಬೇಕಾದರೂ ಊಹಿಸಬಹುದು. ಅಂತಲೇ ‘‘ಅವರು ನನ್ನನ್ನು ಮನೆಗೆ ಕಳಿಸುವಷ್ಟು ಶಕ್ತಿ ಶಾಲಿಗಳು’’ ಎಂದು ಸಹಕಾರ ಸಚಿವರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಶಾಸಕರು ಸಾಮಾನ್ಯರಲ್ಲ. ಇವರು ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ತಮ್ಮದೇ ಸಹಕಾರಿ ಬ್ಯಾಂಕುಗಳನ್ನು ಹೊಂದಿದ್ದಾರೆ. ಇವರನ್ನು ಮುಟ್ಟುವುದು ಸುಲಭವಲ್ಲ. ರಾಜ್ಯದ ಸಹಕಾರಿ ವಲಯದ 34 ಸಕ್ಕರೆ ಕಾರ್ಖಾನೆಗಳ ಪೈಕಿ ಶೇಕಡಾ 50ರಷ್ಟು ಕಾರ್ಖಾನೆಗಳು ಮಾತ್ರ ಪಡೆದ ಸಾಲವನ್ನು ಮರು ಪಾವತಿ ಮಾಡುತ್ತವೆ. ಉಳಿದ ಕಾರ್ಖಾನೆಗಳವರು ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲದ ಬಾಕಿಯಲ್ಲಿ ಒಂದೇ ಒಂದು ಪೈಸೆಯನ್ನೂ ಮರುಪಾವತಿ ಮಾಡದೆ ತಮ್ಮನ್ನು ಯಾರೂ ಏನೂ ಮಾಡಲಾಗದು ಎಂದು ತಮ್ಮ ಪಾಡಿಗೆ ತಾವು ನಿರುಮ್ಮಳವಾಗಿದ್ದಾರೆ. ಇದನ್ನು ಸರಕಾರದ ಸಚಿವರು ಅಸಹಾಯಕರಾಗಿ ಸದನದಲ್ಲಿ ಹೇಳುವಷ್ಟರ ಮಟ್ಟಿಗೆ ಪರಿಸ್ಥಿತಿ ಕಳವಳಕಾರಿಯಾಗಿದೆ.

ಪ್ರಭಾವಿಗಳೆನ್ನಲಾದ ಈ ಶಾಸಕರ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂ. ಮೊತ್ತದ ಸಾಲವನ್ನು ಸಹಕಾರಿ ಬ್ಯಾಂಕುಗಳು ಹೇಗೆ, ಯಾವ ಆಧಾರದಲ್ಲಿ ಕೊಟ್ಟವು? ಇದರ ಹಿಂದಿರುವ ಪ್ರಭಾವಿ ರಾಜಕಾರಣಿಗಳು ಯಾರು? ಸಾಲ ಮರುಪಾವತಿ ಮಾಡದೆ ಸಹಕಾರಿ ಬ್ಯಾಂಕುಗಳ ಪರಾಮರ್ಶನಾ ಸಭೆ ಕೂಡ ನಡೆಯದಂತೆ ನೋಡಿಕೊಂಡ ಬಲಾಢ್ಯರು ಯಾರೆಂಬುದು ಸರಕಾರಕ್ಕೆ ಗೊತ್ತಿಲ್ಲದೆ ಇರುವುದಿಲ್ಲ. ಈ ಸುಸ್ತಿ ಸಾಲದಿಂದಾಗಿ ಸಹಕಾರಿ ಬ್ಯಾಂಕುಗಳು ಒಂದೊಂದಾಗಿ ಮುಳುಗುತ್ತಿರುವುದು ಕಳವಳಪಡಬೇಕಾದ ಸಂಗತಿಯಾಗಿದೆ. ಪ್ರಭಾವಿ ರಾಜಕಾರಣಿಗಳು ತಮ್ಮ ಯೋಗ್ಯತೆಗೆ ಮೀರಿ ಸಾಲ ಪಡೆದ ಪರಿಣಾಮವಾಗಿ ಬ್ಯಾಂಕುಗಳನ್ನು ನಂಬಿ ಹಣವಿಟ್ಟಿರುವ ಜನಸಾಮಾನ್ಯರಿಗೆ ವಂಚನೆಯಾಗಿದೆ. ಅಂತಿಮವಾಗಿ ನಮ್ಮ ಸಹಕಾರಿ ಕ್ಷೇತ್ರದ ಬ್ಯಾಂಕುಗಳು ದಿವಾಳಿಯ ಅಂಚಿಗೆ ಬಂದು ನಿಂತಿವೆ.

ಸಹಕಾರಿ ವಲಯದ ಬ್ಯಾಂಕುಗಳು ಜನಸಾಮಾನ್ಯರ ಕಷ್ಟ ಸುಖಕ್ಕೆ ನೆರವಾಗುತ್ತಾ ಬಂದಿವೆ. ಉದ್ಯಮಪತಿಗಳಿಂದಾಗಿ ಅವು ನಾಶವಾಗಿ ಹೋಗುವ ಪರಿಸ್ಥಿತಿ ಬರಬಾರದು. ಬಾಕಿ ಉಳಿಸಿಕೊಂಡ ಶಾಸಕರು ಎಷ್ಟೇ ಪ್ರಭಾವಿಗಳಾದರೂ ಅವರಿಂದ ಸರಕಾರ ಮುಲಾಜಿಲ್ಲದೆ ಬಾಕಿ ವಸೂಲಿ ಮಾಡಿ ಸಹಕಾರಿ ಬ್ಯಾಂಕುಗಳನ್ನು ಕಾಪಾಡಬೇಕು. ಒಂದೆಡೆ ಸಹಕಾರಿ ಬ್ಯಾಂಕುಗಳಿಗೆ ಪಂಗನಾಮ ಹಾಕುವ ಪ್ರಭಾವಿ ರಾಜಕಾರಣಿಗಳ ಸಕ್ಕರೆ ಕಾರ್ಖಾನೆಗಳು ಇನ್ನೊಂದು ಕಡೆ ರೈತರ ಕಬ್ಬಿನ ಬಾಕಿ ಪಾವತಿ ಮಾಡದೆ ಸತಾಯಿಸುತ್ತವೆ. ಈ ಲೋಪಗಳಿಂದಾಗಿ ಸಹಕಾರಿ ವಲಯ ತೊಂದರೆಗೆ ಸಿಲುಕಿದೆ. ಅದನ್ನು ಉಳಿಸಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ.

ಸಹಕಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಈಗಿನ ಒಕ್ಕೂಟ ಸರಕಾರ ಎಷ್ಟು ಆಸಕ್ತಿ ಹೊಂದಿದೆಯೋ ಗೊತ್ತಿಲ್ಲ. ಆದರೆ ಹಣಕಾಸು ಸಂಪನ್ಮೂಲಗಳ ಸಂಗ್ರಹಕ್ಕಾಗಿ ಸಾರ್ವಜನಿಕ ಆಸ್ತಿಗಳನ್ನು, ಭೂಮಿಯನ್ನು ಮತ್ತು ಸರಕಾರಿ ಉದ್ಯಮಗಳನ್ನು ಖಾಸಗಿ ಬಂಡವಾಳ ಗಾರರಿಗೆ ಗುತ್ತಿಗೆ ನೀಡಲು ಹೊರಟಿರುವ ಸರಕಾರದಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟು ಕೊಳ್ಳಲಾಗದು. ಆದರೂ ಜನಸಾಮಾನ್ಯರ ಹಿತದ ದೃಷ್ಟಿಯಿಂದ ಸಹಕಾರ ಕ್ಷೇತ್ರವನ್ನು ಕಾಪಾಡುವುದು ಅಗತ್ಯವಾಗಿದೆ.

ಸಹಕಾರಿ ಕ್ಷೇತ್ರವನ್ನು ಅಧಿಕಾರದಲ್ಲಿರುವ ರಾಜಕಾರಣಿಗಳಿಂದ ಅದರಲ್ಲೂ ಸಕ್ಕರೆ ಮತ್ತಿತರ ಉದ್ಯಮಗಳನ್ನು ಹೊಂದಿರುವ ರಾಜಕಾರಣಿಗಳಿಂದ ಮುಕ್ತಗೊಳಿಸಬೇಕಾಗಿದೆ. ಸಹಕಾರಿ ಬ್ಯಾಂಕುಗಳಿಗೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಉದ್ಯಮಪತಿಗಳ ಆಸ್ತಿಯನ್ನು ಜಪ್ತ್ತಿ ಮಾಡಿ ಸಹಕಾರಿ ಬ್ಯಾಂಕುಗಳಿಗೆ ಜೀವದಾನ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News