ವೀಡಿಯೊ ಕಾನ್ಫರೆನ್ಸಿಂಗ್‌ನಲ್ಲಿ ನಿರಂತರ ಕೆಮ್ಮಿದ ರಶ್ಯಾ ಅಧ್ಯಕ್ಷ ಪುಟಿನ್

Update: 2021-10-12 16:40 GMT

ಮಾಸ್ಕೋ, ಅ.12: ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ಸಭೆಯ ಸಂದರ್ಭ ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ನಿರಂತರ ಕೆಮ್ಮಿನ ಸಮಸ್ಯೆ ಕಾಡಿದೆ. ಆದರೆ ಇದು ಕೊರೋನ ಸೋಂಕಿನ ಲಕ್ಷಣವಲ್ಲ, ಸ್ವಲ್ಪ ಶೀತ ಕಾಣಿಸಿಕೊಂಡಿದೆ ಎಂದು ಪುಟಿನ್ ಈ ಬಗ್ಗೆ ಸ್ಪಷ್ಟನೆ ನೀಡಿದರು ಎಂದು ಸರಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.

ಕೃಷಿ ಸಂಬಂಧಿ ವಿಷಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಪುಟಿನ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದಾಗ ಅವರಿಗೆ ಕೆಮ್ಮಿನ ಸಮಸ್ಯೆ ಎಡೆಬಿಡದೆ ಕಾಡಿದೆ. ಈ ಸಂದರ್ಭ ಸಂಸತ್ತಿನ ಮೇಲ್ಮನೆಯ ಸ್ಪೀಕರ್ ವೆಲೆಂಟಿನಾ ಮ್ಯಾಟ್ವಿಯೆಂಕೊ ಮಧ್ಯಪ್ರವೇಶಿಸಿ, ಅಧ್ಯಕ್ಷರ ಆರೋಗ್ಯದ ಬಗ್ಗೆ ವಿಚಾರಿಸಿದರು. ನಿಮ್ಮ ಆರೋಗ್ಯದ ಬಗ್ಗೆ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ ಎಂದವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುಟಿನ್, ಆತಂಕ ಪಡಬೇಡಿ, ಎಲ್ಲವೂ ಚೆನ್ನಾಗಿಯೇ ಇದೆ. ಕೊರೋನ ಮಾತ್ರವಲ್ಲ, ಇತರ ಸೋಂಕು ರೋಗದ ಬಗ್ಗೆಯೂ ದೈನಂದಿನ ತಪಾಸಣೆ ನಡೆಸುತ್ತಿದ್ದೇನೆ. ಎಲ್ಲವೂ ಸರಿಯಾಗಿದೆ. ತಂಪಗಿನ ಗಾಳಿಯಲ್ಲಿ ಬೆಳಗ್ಗೆ ಸ್ವಲ್ಪ ಅಡ್ಡಾಡಿದ್ದೆ. ಆದರೆ ಭಯಾನಕ ಸಮಸ್ಯೆಯೇನೂ ಆಗಿಲ್ಲ ಎಂದರು.

ನೀವೆಲ್ಲಾ ಲಸಿಕೆ ಪಡೆದಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ಕೊರೋನ ವಿರುದ್ಧದ ಪ್ರತಿರೋಧ ಶಕ್ತಿ ವೃದ್ಧಿಸುವ ಲಸಿಕೆಯನ್ನೂ ಪಡೆಯಲು ಮರೆಯದಿರಿ’ ಎಂದವರು ದೇಶದ ಜನತೆಗೆ ಕಿವಿಮಾತು ಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News