ಬಿಎಸ್ ವೈ ಆಪ್ತರ ಮನೆ ಮೇಲೆ ದಾಳಿ ಪ್ರಕರಣ: 750 ಕೋಟಿ ರೂ. ಅಕ್ರಮ ಆಸ್ತಿ ಬೆಳಕಿಗೆ

Update: 2021-10-12 15:38 GMT

ಬೆಂಗಳೂರು, ಅ.12: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಆಪ್ತರು ಎನ್ನಲಾದ ಗುತ್ತಿಗೆದಾರರು ಹಾಗೂ ಲೆಕ್ಕ ಪರಿಶೋಧಕರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬಹುಕೋಟಿ ಅಕ್ರಮ ಸಂಪತ್ತು ಬೆಳಕಿಗೆ ಬಂದಿದೆ.

ಇತ್ತೀಚಿಗೆ ಅಕ್ರಮ ಆಸ್ತಿ ಹಾಗೂ ತೆರಿಗೆ ವಂಚನೆ ಆರೋಪ ಸಂಬಂಧ ನಡೆದ ದಾಳಿಯಲ್ಲಿ ಮಹತ್ವದ ದಾಖಲಾತಿ, ಆಸ್ತಿಪತ್ರ, ನಕಲಿ ಬಿಲ್ ಜಪ್ತಿ ಮಾಡಿ ಅಧಿಕಾರಿಗಳು ಪರಿಶೀಲಿಸಿದಾಗ ಮೂವರು ಗುತ್ತಿಗೆದಾರರ ಒಟ್ಟು 750 ಕೋಟಿ ಅಕ್ರಮ ಆಸ್ತಿ ಪತ್ತೆ ಮಾಡಲಾಗಿದೆ.
ಈ ಪೈಕಿ 487 ಕೋಟಿ ರೂಪಾಯಿ ಅಕ್ರಮ ಎಂದು ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ. ಇನ್ನುಳಿದ ಹಣದ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

ಐಟಿ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಅ.7ರಂದು ನಾಲ್ಕು ರಾಜ್ಯಗಳಲ್ಲಿ 47 ಕಡೆ ಐಟಿ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ 4.69 ಕೋಟಿ ನಗದು ಜಪ್ತಿ ಮಾಡಲಾಗಿದೆ. 8.67 ಕೋಟಿ ಮೊತ್ತದ ಚಿನ್ನ, 29.83 ಲಕ್ಷ ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಅಕ್ರಮವಾಗಿ 40 ಜನರ ಹೆಸರಿನಲ್ಲಿ ನೀರಾವರಿ, ಹೆದ್ದಾರಿ ಯೋಜನೆಗಳಲ್ಲಿ ಉಪ ಗುತ್ತಿಗೆ ಪಡೆದು ಅಕ್ರಮ ಎಸಗಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಪ್ರಮುಖ ಗುತ್ತಿಗೆದಾರರು ಸುಮಾರು 382 ಕೋಟಿ ರೂ. ಅಕ್ರಮ ವಹಿವಾಟು ನಡೆಸಿದ್ದಾರೆ. ಕಾರ್ಮಿಕರ ಹೆಸರಲ್ಲಿ ನೂರಾರೂ ಕೋಟಿ ವಂಚನೆ ಎಸಗಿರುವುದು ಗೊತ್ತಾಗಿದೆ. ಕಾರ್ಮಿಕರ ಹೆಸರಿನಲ್ಲಿ ಸಂಬಳ ಹಾಗೂ 40 ಜನರ ಹೆಸರಿನಲ್ಲಿ ಬೋಗಸ್ ಉಪಗುತ್ತಿಗೆದಾರರನ್ನು ಸೃಷ್ಟಿಸಿ ಗೋಲ್‍ಮಾಲ್ ಮಾಡಲಾಗಿದೆ. ಪರಿಶೀಲನೆ ವೇಳೆ ಭೌತಿಕ ದಾಖಲಾತಿ ದೊರೆತಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News