ಮಾಜಿ ಸಿಎಂಗಳ ಭೇಟಿ ವಿಚಾರ; ಕುಮಾರಸ್ವಾಮಿ ಆರೋಪಕ್ಕೆ ಸಿದ್ದರಾಮಯ್ಯ, ಬಿಎಸ್ ವೈ ಪ್ರತಿಕ್ರಿಯೆ

Update: 2021-10-13 08:02 GMT
ಫೈಲ್ ಚಿತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಬಿಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಭೇಟಿ ಕುರಿತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಇದೀಗ ಸಿದ್ದರಾಮಯ್ಯ ಹಾಗೂ ಬಿ.ಎಸ್ ವೈ ಅವರು ಪ್ರತಿಕ್ರಿಯೆ ನೀಡಿದ್ದಾರೆ. 

''ನನ್ನ ಹಾಗೂ ಬಿಎಸ್ ವೈ ಭೇಟಿಯ ಕುರಿತು ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆಗೊಳಿಸಲಿ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. 

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ , ಒಮ್ಮೆಯಾದರೂ ಭೇಟಿಮಾಡಿದ್ದನ್ನು ಸಾಬೀತು ಮಾಡಿದರೆ ನಾನು ರಾಜಕೀಯವಾಗಿ ನಿವೃತ್ತಿಯಾಗಲು ಸಿದ್ಧನಿದ್ದೇನೆ. ಯಡಿಯೂರಪ್ಪ ಅವರನ್ನು ಮೇಲಿಂದ ಮೇಲೆ ಭೇಟಿಯಾಗೋದೆ ಕುಮಾರಸ್ವಾಮಿ.  ಯಡಿಯೂರಪ್ಪ ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಗೃಹ ಸಚಿವ ಅಮಿತ್ ಶಾ ಬಿಜೆಪಿಯವರು, ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕ, ನನ್ನ ಮಾತು ಕೇಳಿ ನರೇಂದ್ರ ಮೋದಿ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ರೇಡ್ ಮಾಡಿಸ್ತಾರ? ಇಂತಹಾ ಆರೋಪಕ್ಕೆ ನಗುಬಹುದು ಅಷ್ಟೆ ಹೇಳಿದ್ದಾರೆ.

ಬಿಎಸ್ ವೈ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ,  ಸದನದಲ್ಲಿ ಹಾಗೂ ಕೆಲವೊಂದು ಸಭೆ ಸಮಾರಂಭಗಳಲ್ಲಿ ಬಿಎಸ್ ವೈ ಮತ್ತು ನಾನು ಮುಖಾಮುಖಿಯಾಗಿದ್ದೇವೆ ಅದು ಹೊರತು ಪಡಿಸಿದರೆ ವೈಯಕ್ತಿಕ ಭೇಟಿಯಾಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. 

ಮಾಜಿ ಸಿಎಂ ಬಿಎಸ್ ವೈ ಸ್ಪಷ್ಟನೆ

ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ದ,  "ಫೆಬ್ರವರಿ 27, 2020ರಂದು ನಡೆದ ನನ್ನ ಜನ್ಮದಿನದ ಕಾರ್ಯಕ್ರಮ ಹೊರತುಪಡಿಸಿ, ವಿರೋಧಪಕ್ಷದ ನಾಯಕ ಶ್ರೀ ಸಿದ್ದರಾಮಯ್ಯನವರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ, ಹಾಗೆ ಭೇಟಿ ಮಾಡುವ ಅಗತ್ಯವೂ ನನಗಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ, ಪಕ್ಷದಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

''ಈ ಗುರಿ ತಲುಪುವ ತನಕ ನಾನು ವಿಶ್ರಮಿಸುವುದಿಲ್ಲ. ನಂಬಿದ ಸಿದ್ಧಾಂತಗಳೊಂದಿಗೆ ನಾನೆಂದಿಗೂ ರಾಜಿಯಾಗಿಲ್ಲ, ಆಗುವುದೂ ಇಲ್ಲ. ಹಾಗೆಯೇ ಶ್ರೀ ಸಿದ್ದರಾಮಯ್ಯನವರು ಕೂಡ ಭೇಟಿಯಾಗಿಲ್ಲವೆಂದು ಸ್ಪಷ್ಟಪಡಿಸಿರುವುದರಿಂದ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಅರ್ಥರಹಿತವಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News