ಬಾಬಾಬುಡಾನ್ ದರ್ಗಾ: ಸಂಘೀ ಕುತಂತ್ರಗಳು ಮತ್ತು ನ್ಯಾಯಾಲಯಗಳಿಂದ ಬಚ್ಚಿಟ್ಟ ಸತ್ಯಗಳು

Update: 2021-10-13 08:52 GMT

ಭಾಗ -1

ಬಾಬಾಬುಡಾನ್ ದರ್ಗಾ ವಿಷಯದಲ್ಲಿ 1990ರ ದಶಕದಿಂದ ಸಂಘಪರಿವಾರ ಸೃಷ್ಟಿಸುತ್ತಾ ಬಂದಿರುವ ವಿವಾದಗಳು ಈಗ ಒಂದು ಪೂರ್ಣ ಸುತ್ತು ಹಾಕಿ ಮತ್ತೆ ಮೊದಲಿಗೆ ಬಂದು ನಿಂತಿದೆ. ಕರ್ನಾಟಕ ಹೈಕೋರ್ಟ್ 2021ರ ಸೆಪ್ಟ್ಟಂಬರ್ 28ರಂದು ಕರ್ನಾಟಕ ಸರಕಾರ ಮತ್ತೊಮ್ಮೆ ಇಡೀ ವಿವಾದವನ್ನು ಹೊಸದಾಗಿ ಪರಿಶೀಲಿಸಬೇಕೆಂದು ಆದೇಶಿಸಿದೆ:

“…The matter is remitted to the State Government with a direction to reconsider the matter afresh in accordance with law without reference to the Report of the High Level Committee.”

(http://karnatakajudiciary.kar.nic.in:8080/repository/rep_judgmentcase.php)

ಹೀಗಾಗಿ ಕರ್ನಾಟಕದ ಬಿಜೆಪಿ ಸರಕಾರವು ಈಗ 2015ರ ಸೆಪ್ಟಂಬರ್ 3 ರಂದು ಸುಪ್ರೀಂ ಕೋರ್ಟ್ ಕೊಟ್ಟ ಆದೇಶದಂತೆ ನಡೆದುಕೊಳ್ಳಬೇಕಿದೆ. ಸುಪ್ರೀಂ ಕೋರ್ಟ್‌ನ ಆದೇಶ ಹೀಗೆ ಹೇಳುತ್ತದೆ:

The State Government will naturally be duty bound to take into account all objections that may be raised against the said Report including the objections raised by the parties to the present appeals, as indicated above. Thereafter, the State Government will decide the matter. In case any of the contesting parties have any grievance against such decision that the State Government may take, it will be open for them to seek recourse to the legal remedies as may be available”

(https://main.sci.gov.in/jonew/courtnic/rop/2008/33157/rop_350643.pdf)

(ಸರಕಾರವು ಮುಜರಾಯಿ ಕಮಿಷನರ್ ಕೊಟ್ಟಿರುವ ವಿಚಾರಣಾ ವರದಿಯ ಬಗ್ಗೆ ಎತ್ತಬಹುದಾದ ಎಲ್ಲಾ ಆಕ್ಷೇಪಣೆಗಳನ್ನು ಹಾಗೂ ಸದರಿ ಪ್ರಕರಣದಲ್ಲಿ ವಾದಿ-ಪ್ರತಿವಾದಿಗಳ ಆಕ್ಷೇಪಣೆಗಳೆಲ್ಲವನ್ನೂ ಪರಿಗಣಿಸುವ ಕರ್ತವ್ಯವನ್ನು ಪಾಲಿಸಬೇಕಿರುತ್ತದೆ. ಆ ನಂತರವೇ ರಾಜ್ಯ ಸರಕಾರವು ಪ್ರಕರಣದ ಬಗ್ಗೆ ತನ್ನ ತೀರ್ಮಾನವನ್ನು ತೆಗೆದುಕೊಳ್ಳಬಹುದಾಗಿದೆ ಹಾಗೂ ಸರಕಾರವು ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಯಾವುದೇ ಅಹವಾಲುದಾರರಿಗೆ ಆಕ್ಷೇಪಣೆಯಿದ್ದಲ್ಲಿ ಲಭ್ಯವಿರುವ ಕಾನೂನು ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ)

ಹೀಗಾಗಿ ಸೆಪ್ಟಂಬರ್ 28ರ ಕರ್ನಾಟಕ ಹೈಕೋರ್ಟ್ ಆದೇಶವೂ ಮತ್ತೊಮ್ಮೆ ಈ ಪ್ರಕ್ರಿಯೆಯನ್ನು ಎಂದರೆ ಎಲ್ಲಾ ಅಹವಾಲುದಾರರ, ವಾದಿ-ಪ್ರತಿವಾದಿಗಳ ಆಕ್ಷೇಪಣೆಗಳನ್ನು ಪರಿಶೀಲಿಸದೆ ಸರಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಂತಿಲ್ಲ ಎಂದೇ ಸೂಚಿಸಿದೆ.

ಆದರೆ ಈ ಸೌಹಾರ್ದ ತಾಣಕ್ಕೆ ಬೆಂಕಿಹಚ್ಚಿ ಅದರ ಕಾವಿನಲ್ಲಿ ರಾಜಕೀಯ ಭವಿಷ್ಯ ರೂಪಿಸಿಕೊಂಡ ಬಿಜೆಪಿ, ಅದರಲ್ಲೂ ಮಂತ್ರಿ ಸುನೀಲ್ ಕುಮಾರ್, ಸಿ.ಟಿ. ರವಿ ಮಾತ್ರ ಕೋರ್ಟ್ ದತ್ತಾತ್ರೇಯ ದೇವಸ್ಥಾನ ಎಂದು ಕೋರ್ಟ್ ತೀರ್ಮಾನಿಸಿದೆ ಎಂದು ಇಡೀ ಆದೇಶವನ್ನು ತಪ್ಪಾಗಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಇದು ಹಿಂದೂಗಳಿಗೆ ಸಿಕ್ಕ ಜಯ ಎಂದು ಘೋಷಿಸುತ್ತಿದ್ದಾರೆ. ಕೋರ್ಟ್‌ನ ಆದೇಶವನ್ನು ಅನುಷ್ಠಾನಕ್ಕೆ ತರಲು ಸರಕಾರ ರಚಿಸಿದ ಕ್ಯಾಬಿನೆಟ್ ಉಪಸಮಿತಿಯಲ್ಲೂ ಸುನೀಲ್ ಕುಮಾರ್ ಅವರನ್ನು ಪ್ರಾರಂಭದಲ್ಲಿ ಸೇರಿಸಿಕೊಳ್ಳಲಾಗಿತ್ತು. ಆದರೆ ಅದರ ವಿರುದ್ಧ ಬಂದ ಪ್ರತಿರೋಧದ ನಂತರ ಅವರನ್ನು ಕೈಬಿಟ್ಟು ಕಾನೂನು ಮಂತ್ರಿ ಮಾಧುಸ್ವಾಮಿ, ಮುಜರಾಯಿ ಮಂತ್ರಿ ಶಶಿಕಲಾ ಜೊಲ್ಲೆ ಹಾಗೂ ಬಂದರು ಮಂತ್ರಿ ಅಂಗಾರ ಅವರನ್ನು ಒಳಗೊಂಡ ಕ್ಯಾಬಿನೆಟ್ ಉಪಸಮಿತಿ ರಚನೆಯಾಗಿದೆ ಹಾಗೂ ರೆವಿನ್ಯೂ ಇಲಾಖೆ ಅಥವಾ ಮುಜರಾಯಿ ಇಲಾಖೆ ವತಿಯಿಂದ ಸಾರ್ವಜನಿಕರ ಆಕ್ಷೇಪಣೆಗಳನ್ನು ಸ್ವೀಕರಿಸಿ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಸರಕಾರ ಸದ್ಯಕ್ಕೆ ಘೋಷಿಸಿದೆ.

ಹೀಗಾಗಿ ಮತ್ತೊಮ್ಮೆ ಈ ವಿವಾದದ ಹಿಂದು-ಮುಂದನ್ನೂ, ಈ ಅಪೂರ್ವ ಸೌಹಾರ್ದ ತಾಣದ ಇತಿಹಾಸವನ್ನೂ, ಸಂಘಪರಿವಾರ-ಸರಕಾರ ನ್ಯಾಯಾಲಯಗಳಿಂದ ಮುಚ್ಚಿಟ್ಟಿರುವ ಸತ್ಯಗಳನ್ನೂ ಹಾಗೂ ಈ ಕುತಂತ್ರಗಳ ಹಿಂದಿರುವ ಅಪಾಯಕಾರಿ ಷಡ್ಯಂತ್ರಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಅವುಗಳನ್ನು ಹಿಮ್ಮೆಟ್ಟಿಸುವ ಅಗತ್ಯವಿದೆ.

ಬಾಬಾಬುಡಾನ್ ದರ್ಗಾ-ವಿವಾದದ ಇತಿಹಾಸ

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡಾನ್ ಗಿರಿಶ್ರೇಣಿಯಲ್ಲಿರುವ ‘ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ’ವು ರಾಜ್ಯದ ಮಾತ್ರವಲ್ಲದೆ ದೇಶದ ಅತ್ಯುನ್ನತ ಕೋಮು ಸೌಹಾರ್ದ ಕೇಂದ್ರವಾಗಿದೆ. ಈ ದರ್ಗಾಕ್ಕೆ ನೂರಾರು ವರ್ಷಗಳಿಂದ ದೇಶದೆಲ್ಲೆಡೆಯಿಂದ ಮುಸ್ಲಿಮರು ಮತ್ತು ಹಿಂದೂ ಧರ್ಮದ ತಳಸಮುದಾಯದವರು ಭಕ್ತಿ ಶ್ರದ್ಧೆಗಳಿಂದ ನಡೆದುಕೊಂಡು ಬರುತ್ತಿದ್ದಾರೆ.

ಉದಾಹರಣೆಗೆ ರಾಜ್ಯ ಪತ್ರಾಗಾರದಲ್ಲಿ ಶೇಖರಿಸಿರುವ ಆಡಳಿತಾತ್ಮಕ ದಾಖಲೆಯೊಂದು 1904-05ರಲ್ಲಿ ಈ ದರ್ಗಾಗೆ ಭೇಟಿ ನೀಡಿದ ಭಕ್ತಾದಿಗಳ ಪಟ್ಟಿಯೊಂದನ್ನು ನೀಡುತ್ತದೆ. ಅದರ ಪ್ರಕಾರ ಆ ಸಾಲಿನಲ್ಲಿ ಒಟ್ಟು 9,788 ಭಕ್ತರು ದರ್ಗಾಗೆ ಭೇಟಿ ನೀಡಿದ್ದರು. ಅವರಲ್ಲಿ 7,237 ಜನರು ಮುಸ್ಲಿಮರು, 638 ಹಿಂದೂಗಳು, 83 ಬ್ರಾಹ್ಮಣರು(!), 140 ಗೋಸಯಿಗಳು, 984 ಫಕೀರರು ಮತ್ತು 706 ಜನ ಪರಯ್ಯಾಗಳು.

(Generl and Revenue Secretariat-1905-6, File No. 258, ಕರ್ನಾಟಕ ರಾಜ್ಯ ಪತ್ರಾಗಾರ)

ಇದೊಂದು ಉದಾಹರಣೆಯೇ ಹೇಗೆ ಈ ಕೇಂದ್ರವು ಎರಡೂ ಧರ್ಮಗಳ ತಳಸಮುದಾಯಗಳ ಶ್ರದ್ಧಾ ಕೇಂದ್ರವಾಗಿತ್ತೆಂಬುದನ್ನು ಸಾಬೀತುಪಡಿಸುತ್ತದೆ. ಹಲವು ನೂರು ವರ್ಷಗಳಿಂದ ಸೂಫಿ ಧರ್ಮಗುರುಗಳು ಅದರ ಶಾಖಾದ್ರಿಗಳಾಗಿ ದರ್ಗಾದ ಧಾರ್ಮಿಕ ಮತ್ತು ಆಡಳಿತಾತ್ಮಕ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಇದನ್ನೇ ಎಲ್ಲಾ ಐತಿಹಾಸಿಕ ದಾಖಲೆಗಳು, ಆಡಳಿತಾತ್ಮಕ ಸನ್ನದುಗಳು, ಬ್ರಿಟಿಷ್ ಮತ್ತು ಸ್ವತಂತ್ರ ಭಾರತದ ಕಾನೂನು ದಾಖಲೆಗಳು ಸಾಬೀತು ಮಾಡುತ್ತವೆ.

ವಾಸ್ತವವೆಂದರೆ, ಪ್ರಕರಣವೊಂದರಲ್ಲಿ ಹೈಕೋರ್ಟ್‌ನ ಆದೇಶದನ್ವಯ ದರ್ಗಾದ ರೀತಿ ರಿವಾಜುಗಳ ಬಗ್ಗೆ ತನಿಖೆ ನಡೆಸಿದ ಮುಜರಾಯಿ ಆಯುಕ್ತರು ತಮ್ಮ 1989ರ ಫೆಬ್ರವರಿ 25ರ ಆದೇಶದಲ್ಲೂ ಈ ವಾಸ್ತವವನ್ನೇ ಸೂತ್ರೀಕರಿಸಿದ್ದಾರೆ. ಈ ಸತ್ಯವನ್ನು ಇತ್ತೀಚಿನವರೆಗೆ ಬಲಪಂಥೀಯ ಸಂಘಟನೆಗಳೂ ಪ್ರಶ್ನಿಸಿರಲಿಲ್ಲ.

ಆದರೆ 1990ರ ನಂತರದಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಕೋಮು ರಾಜಕಾರಣದ ಭಾಗವಾಗಿ ಈ ಸೌಹಾರ್ದ ಕೇಂದ್ರವನ್ನು ಸಹ ಅಶಾಂತಿ ಮತ್ತು ಕೋಮುಗಲಭೆಯ ತಾಣವನ್ನಾಗಿ ಮಾಡಲು ಬಲಪಂಥೀಯ ಶಕ್ತಿಗಳು ಕಳೆದ ಮೂರು ದಶಕಗಳಿಂದ ಸತತ ಪ್ರಯತ್ನಗಳನ್ನು ನಡೆಸುತ್ತಿವೆ. ಅದರಲ್ಲೂ 2002ರಲ್ಲಿ ಬಾಬಾಬುಡಾನ್ ದರ್ಗಾವನ್ನು ಕರ್ನಾಟಕದ ಅಯೋಧ್ಯೆಯನ್ನಾಗಿಯೂ ಮತ್ತು ಕರ್ನಾಟಕವನ್ನು ದಕ್ಷಿಣದ ಗುಜರಾತನ್ನಾಗಿಯೂ ಮಾಡುವುದಾಗಿ ಬಿಜೆಪಿಯು ಬಹಿರಂಗವಾಗಿ ಘೋಷಿಸಿದ ನಂತರ ಬಲಪಂಥೀಯ ಸಂಘಟನೆಗಳು ತಮ್ಮ ಅಧಿಕಾರ, ಹಣ ಮತ್ತು ಜನಬಲವನ್ನು ಬಳಸಿಕೊಂಡು ಅತ್ಯಂತ ಯೋಜಿತವಾಗಿ ಇಲ್ಲಿನ ಮತೀಯ ಸೌಹಾರ್ದವನ್ನು ಹಾಳುಮಾಡುತ್ತಾ ಬರುತ್ತಿವೆ.

ಅದರ ಭಾಗವಾಗಿಯೇ 2003ರಲ್ಲಿ ಹೈಕೋರ್ಟ್‌ನಲ್ಲಿ ದಾವೆಯೊಂದನ್ನು ಹೂಡಿ ಈ ಶ್ರದ್ಧಾ ಕೇಂದ್ರವು ಮೂಲದಲ್ಲಿ ಒಂದು ದತ್ತಾತ್ರೇಯ ದೇವಸ್ಥಾನವಾಗಿತ್ತೆಂದೂ, ಹೈದರಲಿಯ ಆಡಳಿತಾವಧಿಯಲ್ಲಿ ಇದರ ಧಾರ್ಮಿಕ ಸ್ವರೂಪ ದರ್ಗಾ ಆಗಿ ಬದಲಾಗಿ ಮುಸ್ಲಿಮರ ವಶಕ್ಕೆ ಹೋಯಿತೆಂಬ ಸುಳ್ಳು ಕಥನವನ್ನು ಕಟ್ಟಿದರು ಮತ್ತು ಈ ಸಂಸ್ಥೆಯನ್ನು ಹಿಂದೂಗಳ ಸುಪರ್ದಿಗೆ ಕೊಡಬೇಕೆಂದೂ, ಹಿಂದೂ ಆಗಮ ಪದ್ಧತಿಯಲ್ಲಿ ಪೂಜೆಗಳನ್ನು ನೆರೆವೇರಿಸಲು ಅರ್ಚಕರನ್ನು ನೇಮಕ ಮಾಡಬೇಕೆಂದೂ ಮನವಿ ಸಲ್ಲಿಸಿದರು.

ಈ ಬಗ್ಗೆ 2007ರಲ್ಲಿ ತೀರ್ಪು ನೀಡಿದ ಹೈಕೋರ್ಟ್ ಈ ಕಥನದ ಯಥಾರ್ಥತೆಯನ್ನು ಪರಿಶೀಲಿಸಬೇಕೆಂದು ಮುಜರಾಯಿ ಆಯುಕ್ತರಿಗೆ ಆದೇಶ ನೀಡಿ, ಈ ಸಂಸ್ಥೆಯು ದರ್ಗಾ ಎಂದು ಘೋಷಿಸಿದ್ದ 1989ರ ಮುಜರಾಯಿ ಕಮಿಷನರ್‌ನ ಆದೇಶವನ್ನು ರದ್ದುಪಡಿಸಿತು. ಅದಕ್ಕೆ 2008ರಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ 1989ರಲ್ಲಿ ಸೂತ್ರೀಕರಿಸಿದ ರೀತಿಯಲ್ಲೇ ಯಥಾಸ್ಥಿತಿಯನ್ನು ಕಾದಿರಿಸಿಕೊಂಡು ಬರಲು ಸೂಚಿಸಿತು ಮತ್ತು ಆಯುಕ್ತರಿಗೆ ದರ್ಗಾದ ಧಾರ್ಮಿಕ ಸ್ವರೂಪದ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಸಿ ಅದರ ಬಗ್ಗೆ ವರದಿಯನ್ನು ತಮಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕೆಂದು ಆದೇಶಿಸಿತು. ಅದರಂತೆ ಧಾರ್ಮಿಕ ಆಯುಕ್ತರು ಸಾರ್ವಜನಿಕ ವಿಚಾರಣೆ ನಡೆಸಿ ತಮ್ಮ ವರದಿಯನ್ನು 2010ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರು.

ಈ ಮಧ್ಯೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರವು ತನ್ನ ಅಧಿಕಾರವನ್ನು ಬಳಸಿಕೊಂಡು ದರ್ಗಾದಲ್ಲಿ ದತ್ತಾತ್ರೇಯ ಮೂರ್ತಿಯನ್ನು ಸ್ಥಾಪಿಸಲು ಮತ್ತು ಮಳೆಯಿಂದ ಹಾನಿಯಾಗಿದ್ದ ಸಂದರ್ಭವನ್ನು ಬಳಸಿಕೊಂಡು ಇಡೀ ದರ್ಗಾವನ್ನೇ ಕೆಡವಿಹಾಕಲು ಮುಂದಾಗಿತ್ತು. ಅದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಅವರ ಪ್ರಯತ್ನಗಳಿಗೆ ತಡೆಯೊಡ್ಡಿತು.

 ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ನೀಡಲಾದ ಧಾರ್ಮಿಕ ಆಯುಕ್ತರ ವರದಿಯು ಏಕಪಕ್ಷೀಯವಾಗಿತ್ತು. ಇದು ಹಿಂದಿನಿಂದಲೂ ದರ್ಗಾ ಆಗಿತ್ತು ಎಂದು ಸಾಬೀತು ಮಾಡಲು ಒದಗಿಸಲಾಗಿದ್ದ ಹತ್ತಾರು ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಬದಲಿಗೆ ಕೇವಲ ಬಲಪಂಥೀಯ ಅಹವಾಲುದಾರರ ‘ನಂಬಿಕೆ’ಯನ್ನಾಧರಿಸಿದ ನಿಲುವನ್ನು ಒಪ್ಪಿಕೊಂಡಿತು. ಅದನ್ನೇ ಅಧರಿಸಿ ಹೈದರಲಿ ಕಾಲದಲ್ಲಿ ದರ್ಗಾದ ಧಾರ್ಮಿಕ ಸ್ವರೂಪ ಬದಲಾಗಿರಬಹುದೆಂಬ ತೀರ್ಮಾನಕ್ಕೆ ತಲುಪಿ ಅರ್ಚಕರನ್ನು ನೇಮಕ ಮಾಡಲು ಶಿಫಾರಸು ಮಾಡಿತು.

ಆದರೆ ಸುಪ್ರೀಂ ಕೋರ್ಟ್ ಈ ವರದಿಯನ್ನೇನು ಒಪ್ಪಿಕೊಳ್ಳಲಿಲ್ಲ. ಆದರೆ ಅದರ ಯಥಾರ್ಥತೆಯನ್ನು ಪರಿಶೀಲಿಸಿ ವಿವಾದವನ್ನು ಇತ್ಯರ್ಥಗೊಳಿಸಲೂ ಇಲ್ಲ. ಅಷ್ಟರಮಟ್ಟಿಗೆ ಸುಪ್ರೀಂಕೋರ್ಟ್ ಈ ವಿವಾದವನ್ನು ಬಗೆಹರಿಸುವ ಹೊಣೆಗಾರಿಕೆಯನ್ನು ಪೂರೈಸಲಿಲ್ಲ.

ಆದರೂ, ಇದರ ಬಗ್ಗೆ ಕರ್ನಾಟಕ ಸರಕಾರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಹಾಗೂ ಯಾವುದೇ ತೀರ್ಮಾನಕ್ಕೆ ಬರುವ ಮುಂಚೆ ಎರಡೂ ಪಕ್ಷಗಳ ಅಹವಾಲನ್ನೂ ಕೇಳಿಸಿಕೊಳ್ಳಬೇಕೆಂದು 2015ರ ಸೆಪ್ಟಂಬರ್3ರಂದು ಆದೇಶ ನೀಡಿತು.

ಸುಳ್ಳು-ನಂಬಿಕೆಗಳಿಗಿಂತ ಸಾಕ್ಷಿ-ಪುರಾವೆಗಳನ್ನು ಪರಿಶೀಲಿಸಿದ ಉನ್ನತ ಸಮಿತಿ

ಆದರೆ ಅತ್ಯಂತ ಸೂಕ್ಷ್ಮವಾದ ಈ ವಿಷಯದ ಬಗ್ಗೆ ಸರಿಯಾದ ತೀರ್ಮಾನಕ್ಕೆ ಬರಬೇಕೆಂದರೆ ಎರಡೂ ಪಕ್ಷಗಳ ಪ್ರತಿಪಾದನೆ, ಅವರು ಒದಗಿಸುವ ಸಾಕ್ಷ ಪುರಾವೆಗಳನ್ನು ಪರಿಗಣಿಸಬೇಕಾದ ಅಗತ್ಯವನ್ನು ಅಂದಿನ ಸರಕಾರ ಮನಗಂಡಿತು. ಹೀಗಾಗಿ ತಾನೇ ಏಕಾಏಕಿ ತೀರ್ಮಾನ ತೆಗೆದುಕೊಳ್ಳದೆ ಈ ವಿಷಯದಲ್ಲಿ ಎಲ್ಲಾ ಅಂಶಗಳನ್ನೂ ಕೂಲಂಕಷವಾಗಿ ಪರಾಂಬರಿಸಿ, ಪರ ಮತ್ತು ವಿರೋಧವಿರುವ ಎಲ್ಲರ ವಾದಗಳನ್ನೂ, ಅವರು ಒದಗಿಸುವ ದಾಖಲೆಗಳನ್ನು ಪರಿಶೀಲಿಸಿ ಯಾವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತವೆಂದು ಸಲಹೆ ಮಾಡಲು ನ್ಯಾಯಮೂರ್ತಿ ನಾಗಮೋಹನ್‌ದಾಸ್, ವಿದ್ವಾಂಸರಾದ ಷ. ಶೆಟ್ಟರ್ ಮತ್ತು ಪ್ರೊ. ರಹಮತ್ ತರೀಕೆರೆ ಅವರ ನೇತೃತ್ವದಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು 2017ರ ಆಗಸ್ಟ್‌ನಲ್ಲಿ ನೇಮಿಸಿತು.

ಆ ಸಮಿತಿಯು ಎರಡು ಸುತ್ತು ಸಾರ್ವಜನಿಕ ವಿಚಾರಣೆ ನಡೆಸಿ, ಎರಡೂ ಪಕ್ಷಗಳು ಮಂಡಿಸಿದ ದಾಖಲೆಯನ್ನೆಲ್ಲ ಪರಿಶೀಲಿಸಿ 2017ರ ಡಿಸೆಂಬರ್‌ನಲ್ಲಿ ಈ ಕೆಳಗಿನ ತೀರ್ಮಾನಗಳಿಗೆ ಬಂದಿತು:

 1. ಸದರಿ ದರ್ಗಾದಲ್ಲಿ ಅರ್ಚಕರನ್ನು ನೇಮಕ ಮಾಡಿ ಅದರ ಧಾರ್ಮಿಕ ಸ್ವರೂಪ ಬದಲಾವಣೆ ಮಾಡಲು ಬರುವುದಿಲ್ಲ. ಏಕೆಂದರೆ 1991ರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿಶೇಷ ಕಾಯ್ದೆಯ ಪ್ರಕಾರ ಬಾಬರಿ ಮಸೀದಿ-ರಾಮಜನ್ಮಭೂಮಿ ಪ್ರಕರಣವೊಂದನ್ನು ಹೊರತು ಪಡಿಸಿ ಭಾರತದಲ್ಲಿರುವ ಮಿಕ್ಕೆಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಧಾರ್ಮಿಕ ಸ್ವರೂಪವನ್ನು 1947ರ ಆಗಸ್ಟ್ 15ರಂದು ಯಾವ ಸ್ವರೂಪದಲ್ಲಿತ್ತೋ ಅದೇ ಸ್ವರೂಪದಲ್ಲಿ ಉಳಿಸಿಕೊಳ್ಳತಕ್ಕದ್ದು. ಬದಲಿಗೆ ಅದರ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವುದು, ತಿದ್ದುಪಡಿ ತರುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. 1947ರ ಆಗಸ್ಟ್ 15ರಂದು ಸದರಿ ಸಂಸ್ಥೆಯಲ್ಲಿ ಹಿಂದೂ ಆಗಮ ಪದ್ಧತಿಯಲ್ಲಿ ಪೂಜೆಯು ನಡೆಯುತ್ತಿರಲಿಲ್ಲ ಮತ್ತು ಅರ್ಚಕರೂ ಇರಲಿಲ್ಲವೆಂಬುದನ್ನು ದಾಖಲೆಗಳು ಸಾಬೀತು ಮಾಡುತ್ತವೆ. ಇದು ಹೈದರಲಿ ಕಾಲಾವಧಿಗೆ ಮುನ್ನ ದತ್ತಾತ್ರೇಯ ದೇವಸ್ಥಾನವಾಗಿತ್ತೆಂದು ಪ್ರತಿಪಾದನೆ ಮಾಡುತ್ತಿರುವವರೂ 1947ರ ಆಗಸ್ಟ್ 15ರಂದು ಈ ಸಂಸ್ಥೆಯು ಒಂದು ದರ್ಗಾ ಆಗಿತ್ತೇ ಹೊರತು ದೇವಸ್ಥಾನವಾಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಈಗ ಹಿಂದೂ ಆಗಮ ಪದ್ಧತಿಗೂ ಮತ್ತು ಅರ್ಚಕರ ನೇಮಕಾತಿಗೂ ಅವಕಾಶ ಮಾಡಿಕೊಡುವ ಕ್ರಮವು ಈ ಸಂಸ್ಥೆಯ ಧಾರ್ಮಿಕ ಸ್ವರೂಪ ಬದಲು ಮಾಡಿದಂತಹ ಅಪರಾಧವಾಗುತ್ತದೆ. ಆದ್ದರಿಂದ ದರ್ಗಾದಲ್ಲಿ ಅಂತಹ ಯಾವುದೇ ಬದಲಾವಣೆಗೆ ಅವಕಾಶ ಮಾಡಿಕೊಡಕೂಡದು.

2. ಸಮಿತಿಯ ಮುಂದೆ ಎರಡು ಪಕ್ಷಗಳು ಮುಂದಿಟ್ಟ ದಾಖಲೆಗಳೆಲ್ಲವೂ ಈ ಕೇಂದ್ರವು ಹಿಂದಿನಿಂದಲೂ ಹಿಂದೂ ಮುಸ್ಲಿಮರಿಬ್ಬರು ನಡೆದುಕೊಳ್ಳುವ ಒಂದು ದರ್ಗಾ ಆಗಿತ್ತೇ ವಿನಃ ದತ್ತಾತ್ರೇಯ ದೇವಸ್ಥಾನವಾಗಿರಲಿಲ್ಲ ಎಂಬುದನ್ನು ಸಾಬೀತು ಮಾಡುತ್ತದೆ. ಅದನ್ನು ಹೊರತುಪಡಿಸಿ ಯಾವುದಾದರೂ ಕಾಲಘಟ್ಟದಲ್ಲಿ ಇದು ದೇವಸ್ಥಾನ ಆಗಿತ್ತೆಂಬ ಬಗ್ಗೆ ಅಥವಾ ಹಿಂದೂ ಅರ್ಚಕರು ಹಿಂದೂ ಆಗಮ ಪದ್ಧತಿಯಲ್ಲಿ ಪೂಜೆ ಮಾಡುತ್ತಿದ್ದರೆಂಬ ಬಗ್ಗೆ ಯಾವ ಪುರಾವೆ ಅಥವಾ ಸಾಕ್ಷಗಳನ್ನು ಯಾರೂ ಒದಗಿಸಿಲ್ಲ.

ಸಮಿತಿಯ ಈ ಶಿಫಾರಸನ್ನು ಆಧರಿಸಿ ಕರ್ನಾಟಕ ಸರಕಾರವು 2018ರ ಮಾರ್ಚ್ 19ರಂದು ಸದರಿ ಸಂಸ್ಥೆಯಲ್ಲಿ ಯಥಾ ಸ್ಥಿತಿಯನ್ನು ಕಾಯ್ದುಕೊಂಡು ಬರಲು ಆದೇಶ ನೀಡಿತು.

ಬದಲಾದ ಸರಕಾರ- ನೈಜ ಪ್ರತಿವಾದವೇ ಇಲ್ಲದೆ ಬದಲಾದ ನ್ಯಾಯಾದೇಶ!

ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನ ಸಮಿತಿ 2018ರ ಜೂನ್‌ನಲ್ಲೇ ಹೈಕೋರ್ಟ್‌ನಲ್ಲಿ ರಿಟ್ ಪೆಟಿಷನ್ ದಾಖಲಿಸಿತು. ಅದರಲ್ಲಿ ಸರಕಾರದ ಆದೇಶವನ್ನು ರದ್ದುಪಡಿಸಿ ಹಿಂದೂ ಅರ್ಚಕರನ್ನು ನೇಮಕ ಮಾಡಲು ಕೋರಲಾಗಿತ್ತು. ಸರಕಾರವನ್ನು ಮತ್ತು ದರ್ಗಾದ ಆಡಳಿತಾಧಿಕಾರಿಯಾಗಿರುವ ಶಾಖಾದ್ರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. 2008-15ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಇದೇ ಪ್ರಕರಣದಲ್ಲಿ ಅಹವಾಲುದಾರರಾಗಿದ್ದ ಇತರರಿಗೆ ಕೋರ್ಟ್ ಪ್ರತ್ಯೇಕ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದರೆ 2019ರ ಜುಲೈನಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬಂದಿತು. ಬಿಜೆಪಿ ಸರಕಾರ ನೇಮಕ ಮಾಡಿದ ಬಹುಪಾಲು ಸರಕಾರಿ ವಕೀಲರು ಆರೆಸ್ಸೆಸ್ ಅಥವಾ ಬಿಜೆಪಿ ಬೆಂಬಲಿಗರೇ ಆಗಿದ್ದರು. ಇದರ ಪರಿಣಾಮ ಈ ಪ್ರಕರಣದ ಮೇಲೂ ನೇರವಾಗಿ ಬೀರಿತು. ಈ ಪ್ರಕರಣದಲ್ಲಿ ಸರಕಾರಿ ವಕೀಲರು ಸರಕಾರದ ನಿರ್ಧಾರದ ಹಿಂದಿನ ತರ್ಕ ಮತ್ತು ಪುರಾವೆಗಳನ್ನು ಕೋರ್ಟ್‌ನ ಗಮನಕ್ಕೆ ತರದೆ ದತ್ತಾತ್ರೇಯ ಸಂವರ್ಧನ ಸಮಿತಿಯ ಅರ್ಥಾತ್ ಸಂಘಪರಿವಾರದ ಸುಳ್ಳುಪೊಳ್ಳುಗಳ ವಾದಗಳನ್ನೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಮರ್ಥಿಸಿದರು. ಹೀಗಾಗಿ ಪ್ರತಿವಾದಿಗಳ ತರ್ಕ ಮತ್ತು ಪುರಾವೆಗಳೇ ನ್ಯಾಯಾಧೀಶರ ಗಮನಕ್ಕೆ ಬಾರದಂತಾಯಿತು.

ಹೀಗಾಗಿ ಸೆಪ್ಟಂಬರ್ 28ರ ಆದೇಶವೂ ಅಂತಿಮವಾಗಿ ಸರಕಾರ ಮತ್ತೊಮ್ಮೆ ಮರುಪರಿಶೀಲನೆ ಮಾಡಬೇಕೆಂದು ಆದೇಶಿಸಿದ್ದರೂ ಅದಕ್ಕೆ ಸಂಗಳು ಮುಂದಿಟ್ಟ ಸುಳ್ಳು ವಾದಗಳು ಹಾಗೂ ಹುಸಿ ತರ್ಕಗಳನ್ನೇ ಆಧಾರವಾಗಿರಿಸಿಕೊಂಡಿದೆ.

ಆದ್ದರಿಂದ ಆ ಸುಳ್ಳುಗಳನ್ನು ಒಮ್ಮೆ ಕರ್ನಾಟಕದ ಸೌಹಾರ್ದ ಪ್ರಿಯ ಜನತೆ ಗಮನಿಸುವುದು ಸೂಕ್ತವಾದುದು.

ಬಿಜೆಪಿ ಸರಕಾರ ನೇಮಕ ಮಾಡಿದ ಬಹುಪಾಲು ಸರಕಾರಿ ವಕೀಲರು ಆರೆಸ್ಸೆಸ್ ಅಥವಾ ಬಿಜೆಪಿ ಬೆಂಬಲಿಗರೇ ಆಗಿದ್ದರು. ಇದರ ಪರಿಣಾಮ ಈ ಪ್ರಕರಣದ ಮೇಲೂ ನೇರವಾಗಿ ಬೀರಿತು. ಈ ಪ್ರಕರಣದಲ್ಲಿ ಸರಕಾರಿ ವಕೀಲರು ಸರಕಾರದ ನಿರ್ಧಾರದ ಹಿಂದಿನ ತರ್ಕ ಮತ್ತು ಪುರಾವೆಗಳನ್ನು ಕೋರ್ಟ್ ನ ಗಮನಕ್ಕೆ ತರದೆ ದತ್ತಾತ್ರೇಯ ಸಂವರ್ಧನ ಸಮಿತಿಯ ಅರ್ಥಾತ್ ಸಂಘಪರಿವಾರದ ಸುಳ್ಳುಪೊಳ್ಳುಗಳ ವಾದಗಳನ್ನೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಮರ್ಥಿಸಿದರು. ಹೀಗಾಗಿ ಪ್ರತಿವಾದಿಗಳ ತರ್ಕ ಮತ್ತು ಪುರಾವೆಗಳೇ ನ್ಯಾಯಾಧೀಶರ ಗಮನಕ್ಕೆ ಬಾರದಂತಾಯಿತು.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News