''ರಾಜಕೀಯದಲ್ಲಿ ಜೈಕಾರ ಹಾಕುವವರು ಇರುತ್ತಾರೆ, ಮೊಟ್ಟೆ ಎಸೆಯುವವರೂ ಇರುತ್ತಾರೆ'': ಡಿ.ಕೆ.ಶಿವಕುಮಾರ್

Update: 2021-10-13 18:37 GMT

ಬೆಂಗಳೂರು, ಅ.13:  ಕಾಂಗ್ರೆಸ್ ಮಾಧ್ಯಮ ಸಂಯೋಜಕ  ಸಲೀಂ ಹಾಗೂ ಉಗ್ರಪ್ಪ ಅವರ ನಡುವೆ ನಡೆದಿರುವ ಸಂಭಾಷಣೆ ವೇಳೆ ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ''ಪಕ್ಷ ಶಿಸ್ತು ಸಮಿತಿಗೆ ತೆಗೆದುಕೊಂಡು ಕ್ರಮಕೈಗೊಳ್ಳಲಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿ ನನಗೂ, ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ''  ಎಂದು ಹೇಳಿದರು.

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಜಕೀಯದಲ್ಲಿ ಜೈಕಾರ ಹಾಕುವವರು ಇರುತ್ತಾರೆ, ಮೊಟ್ಟೆ ಎಸೆಯುವವರೂ ಇರುತ್ತಾರೆ. ಈ ಸಂಬಂಧ ರೆಹಮಾನ್ ಖಾನ್ ನೇತೃತ್ವದ ಕಾಂಗ್ರೆಸ್ ಶಿಸ್ತು ಸಮಿತಿಯು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ದೊಡ್ಡ ಸ್ಕ್ಯಾಮ್, ಕೆದಕುತ್ತಾ ಹೋದರೆ ಇವರದ್ದು ಬಹಿರಂಗವಾಗುತ್ತೆ. ಅವರು ಬರೀ ಕಲೆಕ್ಷನ್ ಗಿರಾಕಿ ಎಂದು ಕಾಂಗ್ರೆಸ್ ನ ಮಾಧ್ಯಮ ಸಂಯೋಜಕ  ಸಲೀಂ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಜೊತೆ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿತ್ತು.

ವಿ.ಎಸ್.ಉಗ್ರಪ್ಪ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಗೂ ಮುನ್ನ ಇವರಿಬ್ಬರೂ ವೇದಿಕೆ ಮೇಲೆ ಮಾತನಾಡಿದ್ದು ಮಾಧ್ಯಮಗಳ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಆದರೆ, ಇದ್ಯಾವುದರ ಅರಿವು ಇಲ್ಲದೆ ಡಿ.ಕೆ.ಶಿವಕುಮಾರ್ ಬಗ್ಗೆ ಇವರು ಮಾತನಾಡಿದ್ದಾರೆ.

ಆರಂಭದಲ್ಲಿ ಮಾತನಾಡುವ ಸಲೀಮ್, ‘ಏನಾಗಿದೆ ಅಂದರೆ 6 ರಿಂದ 8 ಪರ್ಸೆಂಟ್ ಇತ್ತು. ಈಗ 12 ಪರ್ಸೆಂಟ್ ಮಾಡಿದ್ದಾರೆ. ಅಡ್ಜೆಸ್ಟ್‍ಮೆಂಟ್ ಎಲ್ಲ ಡಿ.ಕೆ.ದು. ಉಪ್ಪಾರ್, ಜಿ.ಶಂಕರ್, ಬಳ್ಳಾರಿ ಹೊಸಪೇಟೆಯ ಹನುಮಂತಪ್ಪ, ಉಪ್ಪಾರ್ ಬೆಂಗಳೂರಿನವನು ಎನ್ನುತ್ತಾರೆ. ಆಗ ಉಗ್ರಪ್ಪ ಪ್ರತಿಕ್ರಿಯಿಸಿ ಉಪ್ಪಾರ್ ಬಿಜಾಪುರದವನು ಎನ್ನುತ್ತಾರೆ. ನಂತ ಮಾತು ಮುಂದುವರೆಸುವ ಸಲೀಮ್, ಇಲ್ಲಿ ಎಸ್.ಎಂ.ಕೃಷ್ಣ ಮನೆ ಬಳಿ ಅವನ ಮನೆ. ಇದು ದೊಡ್ಡ ಸ್ಕ್ಯಾಮ್. ಕೆದಕುತ್ತಾಹೋದರೆ ಇವರದ್ದು ಬಹಿರಂಗವಾಗುತ್ತೆ ಎನ್ನುತ್ತಾರೆ.

ನಮ್ಮ ಹುಡುಗಂದು 50 ರಿಂದ 100 ಕೋಟಿ ಇದೆ ಅಂದರೆ, ಡಿ.ಕೆ.ಹತ್ತಿರ ಎಷ್ಟು ಇರಬಹುದು ಲೆಕ್ಕಹಾಕಿ. ಡಿ.ಕೆ.ಬರಿ ಕಲೆಕ್ಷನ್ ಗಿರಾಕಿ ಎಂದು ಸಲೀಮ್ ಹೇಳುತ್ತಾರೆ. ಈ ವೇಳೆ ಮಾತನಾಡುವ ಉಗ್ರಪ್ಪ, ನಾವೆಲ್ಲ ಪಟ್ಟು ಹಿಡಿದು ಅಧ್ಯಕ್ಷ ಮಾಡಿದ್ದು, ಅದಕ್ಕೆ ಎಲ್ಲೂ ಇವನ್ನು ಹೇಳಲ್ಲ ಎನ್ನುತ್ತಾರೆ.

ನಂತರ ಮಾತು ಮುಂದುವರಿಸುವ ಸಲೀಂ, ಮಾತನಾಡಿದರೆ ತೊದಲುತಾನೆ. ಕುಡಕನ ರೀತಿ, ಮಾಧ್ಯಮದವರು ಕೇಳಿದರು ಅವತ್ತು ಏನು ಡ್ರಿಂಕ್ಸ್ ಮಾಡುತ್ತಾರಾ ಅಂತ. ಹಾಗೇನಿಲ್ಲ ಲೋ ಬಿಪಿ ಅಂದೆ. ಅವರ ಮಾತಿನ ಶೈಲಿ ಅದು. ಭಾವೋದ್ವೇಗಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯ ಬಾಡಿಲ್ಯಾಂಗ್ವೆಜ್ ನೋಡಿ ಖಡಕ್ ಅಂದರೆ ಖಡಕ್ ಎನ್ನುವ ಬಗ್ಗೆ ವೈರಲ್ ವೀಡಿಯೋದಲ್ಲಿ ದಾಖಲಾಗಿದೆ. 

ಬಿಜೆಪಿ ವಾಗ್ದಾಳಿ: ಕಾಂಗ್ರೆಸ್ ನಾಯಕರ ನಡುವಿನ ವಿಡಿಯೋ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಸೀಸರ್ ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ? ಎಂದು ಪ್ರಶ್ನಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ನಡೆದ ಐಟಿ, ಈ.ಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾ ಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗೂ ಸಲೀಮ್ ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಮುಖ್ಯಮಂತ್ರಿಯಾಗುವ ಡಿ.ಕೆ.ಶಿವಕುಮಾರ್ ಅವರ ಕನಸಿಗೆ ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ. ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು ಸ್ಬಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ. ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ ‘ಡಿಕೆಶಿ ಪದಚ್ಯುತಿ’ ಎಂಬ ಮಾಸ್ಟರ್ ಪ್ಲ್ಯಾನ್‍ನ ಭಾಗವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News