''ಅವರ ತಂದೆ ಇದ್ದ ಹುದ್ದೆ ಪುಟಗೋಸಿಯೇ'': ಎಚ್‍ಡಿಕೆಗೆ ಸಿದ್ದರಾಮಯ್ಯ ತಿರುಗೇಟು

Update: 2021-10-13 12:49 GMT

ಕಲಬುರಗಿ, ಅ. 13: `ಒಬ್ಬ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೊಡುವ ಗೌರವ ಅವರ ಮಾತಿನಿಂದಲೇ ತಿಳಿಯುತ್ತಿದೆ. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ಅವರ ತಂದೆ ಇದ್ದ ಹುದ್ದೆ `ಪುಟಗೋಸಿ' ಹುದ್ದೆಯಾ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದವರು ಒಟ್ಟು 17 ಜನ. ಇದರಲ್ಲಿ ಜೆಡಿಎಸ್‍ನ ಶಾಸಕರು 3 ಜನರಿದ್ದಾರೆ. ಅವರನ್ನು ನಾನೇ ಕಳಿಸಿದ್ದಾ? ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪುಟಗೋಸಿ ಹುದ್ದೆ ಎಂದು ಕರೆದಿರುವ ಕುಮಾರಸ್ವಾಮಿ ಹೇಳಿಕೆ ಸಂವಿಧಾನಾತ್ಮಕ ಹುದ್ದೆಗೆ ಮಾಡಿದ ಅವಮಾನ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ವಿಶ್ವಾಸ ಮತ ಗೊತ್ತುವಳಿ ವೇಳೆ ಕುಮಾರಸ್ವಾಮಿ ಏನೆಂದು ಭಾಷಣ ಮಾಡಿದ್ರು? ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ, ಅಧಿಕಾರ ಮತ್ತು ಹಣದಾಸೆಗೆ ನಮ್ಮ ಶಾಸಕರನ್ನು ಬಿಜೆಪಿ ಖರೀದಿ ಮಾಡಿದ್ದರಿಂದ ನನ್ನ ಸರಕಾರ ಹೋಗಿದೆ ಎಂದು ಹೇಳಿದರೆ, ಹೊರತು ಸಿದ್ದರಾಮಯ್ಯ ಪಕ್ಷದ ಶಾಸಕರನ್ನು ಬಿಜೆಪಿಗೆ ಕಳುಹಿಸಿದರು ಎಂದು ಹೇಳಿದ್ರಾ? ನಾನು ಅವರನ್ನು ಕಳುಹಿಸಿದರೆ ಅಂದೇ ಹೇಳಬೇಕಿತ್ತು, ಉತ್ತರ ಕೊಡ್ತಿದ್ದೆ. ಕುಮಾರಸ್ವಾಮಿಗೆ ಎಷ್ಟು ನಾಲಿಗೆ ಇದೆ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

`ಇದೀಗ ಕುಮಾರಸ್ವಾಮಿ ಮೈಸೂರಿನ ಜನರನ್ನು ನನ್ನ ವಿರುದ್ಧ ಎತ್ತಿಕಟ್ಟಲು ಇಂತಹ ಕೀಳುಮಟ್ಟದ ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಸರಕಾರ ಬೀಳುವ ಹಂತಕ್ಕೆ ಹೋದಾಗ ಕುಮಾರಸ್ವಾಮಿ ಅಮೇರಿಕ ಹೋಗಿ ಕೂತಿದ್ದು ಏಕೆ? ನಾನೇ ಫೋನ್ ಮಾಡಿ ಕುಮಾರಸ್ವಾಮಿ ಅವರೆ ಸರಕಾರ ಬೀಳುವ ಹಂತಕ್ಕೆ ಹೋಗಿದೆ, ಭಾರತಕ್ಕೆ ಬನ್ನಿ ಎಂದು ಕರೆದರೆ ಇವತ್ತು ಬರ್ತೀನಿ, ನಾಳೆ ಬರ್ತೀನಿ ಎಂದು ಹೇಳುತ್ತಾ ಅಮೇರಿಕಾದಲ್ಲೇ 9 ದಿನ ಕಳೆದರು' ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

`ಮುಖ್ಯಮಂತ್ರಿಯಾದವರು ತಾಜ್ ವೆಸ್ಟಂಡ್ ಹೊಟೇಲ್‍ನಲ್ಲಿ ಕೂತು ಸರಕಾರ ನಡೆಸೋದಾ? ಒಬ್ಬ ಶಾಸಕನನ್ನು, ಸಚಿವನನ್ನು ಭೇಟಿ ಮಾಡದೆ ಸರಕಾರ ನಡೆಸಲು ಆಗುತ್ತಾ? ಈ ಕಾರಣಕ್ಕೆ ಕುಮಾರಸ್ವಾಮಿ ಅವರ ಸರಕಾರ ಹೋಗಿದ್ದು. ಇದು ಹತ್ತೋ, ಹನ್ನೆರಡನೇ ಬಾರಿಯೋ ಈ ಆರೋಪವನ್ನು ಅವರು ಮಾಡಿದ್ದಾರೆ, ನನಗೂ ಪದೇ ಪದೇ ಉತ್ತರ ಕೊಟ್ಟು ಸಾಕಾಗಿದೆ. ಮತ್ತೆ ಇಂತಹ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ' ಎಂದು ಅವರು ನುಡಿದರು.

`ಬಿಎಸ್‍ವೈ ಹುಟ್ಟುಹಬ್ಬದ ದಿನ ಅವರನ್ನು ನಾನು ಕಡೇ ಬಾರಿ ಭೇಟಿಯಾದದ್ದು, ಆಮೇಲೆ ಒಂದು ದಿನವೂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಒಮ್ಮೆಯಾದರೂ ಭೇಟಿ ಮಾಡಿದ್ದನ್ನು ಸಾಬೀತು ಮಾಡಿದರೆ ನಾನು ರಾಜಕೀಯವಾಗಿ ನಿವೃತ್ತಿಯಾಗಲು ಸಿದ್ಧನಿದ್ದೇನೆ. ಯಡಿಯೂರಪ್ಪ ಅವರನ್ನು ಮೇಲಿಂದ ಮೇಲೆ ಭೇಟಿಯಾಗೋದೆ ಕುಮಾರಸ್ವಾಮಿ. ಬಿಎಸ್‍ವೈ ಬಿಜೆಪಿಯ ಮಾಜಿ ಸಿಎಂ, ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ, ಗೃಹ ಸಚಿವ ಅಮಿತ್ ಶಾ ಬಿಜೆಪಿಯವರು, ನಾನು ವಿಪಕ್ಷ ನಾಯಕ, ನನ್ನ ಮಾತು ಕೇಳಿ ಮೋದಿ, ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ದಾಳಿ ಮಾಡಿಸ್ತಾರಾ? ಇಂತಹಾ ಆರೋಪಕ್ಕೆ ನಗುಬಹುದು ಅಷ್ಟೆ' ಎಂದು ಅವರು ಪ್ರಶ್ನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News