ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ಅಪಾರ್ಥಗೊಳಿಸಲಾಗಿದೆ: ವಿ.ಎಸ್.ಉಗ್ರಪ್ಪ

Update: 2021-10-13 12:58 GMT

ಬೆಂಗಳೂರು, ಅ.13: ಜಲಸಂಪನ್ಮೂಲ ಇಲಾಖೆಯಲ್ಲಿ ಆಗಿರುವ ಹಗರಣಗಳ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಿಜೆಪಿಯವರು ನಮ್ಮ ಪಕ್ಷದ ಮುಖಂಡರ ಮೇಲೆ ಗೂಬೆ ಕೂರಿಸಲು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಲೀಂ ನನ್ನ ಗಮನಕ್ಕೆ ತರುತ್ತಿದ್ದುದ್ದನ್ನು ಮಾಧ್ಯಮಗಳಲ್ಲಿ ಬೇರೆ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅತ್ಯಂತ ಉತ್ತಮ ಆಡಳಿತಗಾರ, ಬದ್ಧತೆ, ಜನಪರವಾಗಿರುವ ರಾಜಕಾರಣಿ. ಅವರು ಗಳಿಸಿರುವ ಆಸ್ತಿ ರಾಜಕಾರಣದಿಂದಲ್ಲ. ಅವರ ವ್ಯಾಪಾರ, ವಹಿವಾಟಿನಿಂದ ಸಂಪಾದನೆ ಮಾಡಿದ್ದಾರೆ. ಅದನ್ನು ರಾಜಕಾರಣದಲ್ಲಿ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ್ ಎಂದಿಗೂ ಪರ್ಸೆಂಟೇಜ್ ರಾಜಕಾರಣಕ್ಕೆ ಹೋದವರಲ್ಲ. ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಬೇಕು. ಆಗ ತಕ್ಕಡಿ ಮೇಲೆ ಹೋಗುತ್ತದೆ ಎಂದು ನಾನು ಹೇಳಿದ್ದೇನೆ. ಆದರೆ, ಮಾಧ್ಯಮದವರು ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಬೇರೆ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.

ನಮ್ಮ ಪಕ್ಷದ ಅಧ್ಯಕ್ಷ ಹಾಗೂ ಮುಖಂಡರು ಕಮಿಷನ್ ಪ್ರವೃತ್ತಿ ಬೆಳೆಸಿದವರಲ್ಲ. ಪಿಸುಗುಟ್ಟಿದ ಮಾತನ್ನು ತೆಗೆದುಕೊಂಡು ವೈಭವಿಕರಿಸಿ, ಪಕ್ಷದ ಅಧ್ಯಕ್ಷರೇ ಮಾಡುತ್ತಿದ್ದಾರೆ, ಕಮಿಷನ್ ಪಡೆಯುತ್ತಿದ್ದಾರೆ. ಪಕ್ಷದ ಕಚೇರಿಯಲ್ಲೆ ಹೀಗೆ ಆಗಿದೆ ಎಂದು ಹೇಳಿ ಬಿಂಬಿಸುವುದು ಬಹುಷಃ ಮಾಧ್ಯಮಗಳ ಮೌಲ್ಯಗಳಿಗೆ ಸಮಂಜಸವಲ್ಲ ಎಂದು ಅವರು ಹೇಳಿದರು.

ಕಮಿಷನ್, ಭ್ರಷ್ಟಾಚಾರ ಕಾಂಗ್ರೆಸ್‍ಗೆ ದೂರ. ಅದರಲ್ಲೂ ನಮ್ಮ ಪಕ್ಷದ ಅಧ್ಯಕ್ಷರಿಗೆ ದೂರ. ಸಿದ್ದರಾಮಯ್ಯ ಮೇಲೆ ಕಳೆದ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಕಮಿಷನ್ ಆರೋಪ ಹೊರಿಸಿದಾಗ ವಕೀಲನಾಗಿ ನಾನೇ 100 ಕೋಟಿ ರೂ.ಗಳ ಮಾನನಷ್ಟ ನೋಟಿಸ್ ಕೊಟ್ಟಿದೆ. ಆದರೆ, ಈವರೆಗೆ ಅದಕ್ಕೆ ಉತ್ತರ ಕೊಟ್ಟಿಲ್ಲ ಎಂದು ಉಗ್ರಪ್ಪ ಹೇಳಿದರು.

ಭ್ರಷ್ಟಾಚಾರದ ಗಂಗೋತ್ರಿ ಹರಿಸುತ್ತಿರುವುದು ಬಿಜೆಪಿಯವರು. ಈ.ಡಿ, ಐಟಿಯವರು ರಾಜ್ಯದಲ್ಲಿ ದಾಳಿ ಮಾಡಿ, ನಮ್ಮ ಒತ್ತಾಯದ ಬಳಿಕ 750 ಕೋಟಿ ರೂ. ವ್ಯತ್ಯಾಸ ಆಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಯಾರು ಹೊಣೆ, ಯಾರ ಆಡಳಿತದಲ್ಲಿ ಆಗಿದೆ? ಬಿಜೆಪಿ, ನರೇಂದ್ರ ಮೋದಿ ಈ ವಿಚಾರದಲ್ಲಿ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News