ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ

Update: 2021-10-15 04:44 GMT

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ವಿಜಯದಶಮಿಯ ದಿನವಾದ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿದರು.

ಅಂಬಾರಿಯಲ್ಲಿ ಸಾಗುವ ಉತ್ಸವ ಮೂರ್ತಿಯನ್ನು ಅರಮನೆಗೆ ಇದೇ ಮೊದಲ ಬಾರಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ಅಲಂಕೃತ ವಾಹನದಲ್ಲಿದ್ದ ಉತ್ಸವ ಮೂರ್ತಿಗೆ ಸಚಿವ ಸೋಮಶೇಖರ್ ಅವರು ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯದೊಂದಿಗೆ ಉತ್ಸವ ಮೂರ್ತಿಯೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದರು.

ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಭಜನಾ ತಂಡ, ವೇದಘೋಷದೊಂದಿಗೆ ತೆರೆದ ವಾಹನದಲ್ಲಿ ಅರಮನೆಗೆ ಕರೆತರುತ್ತಿದ್ದ ಉತ್ಸವ ಮೂರ್ತಿಯನ್ನು ನೋಡಲು ಬೆಟ್ಟದ ಪ್ರವೇಶದ್ವಾರ, ರಸ್ತೆಯ ಇಕ್ಕೆಲಗಳಲ್ಲಿ ಭಕ್ತ ಸಾಗರ ಮೆರೆದಿತ್ತು. ಉತ್ಸವ ಮೂರ್ತಿ ಸಾಗುವ ಮಾರ್ಗದ ರಸ್ತೆಯಲ್ಲಿ ಹೂಗಳನ್ನು ಚೆಲ್ಲಿ ದೇವಿಯನ್ನು ಬರಮಾಡಿಕೊಳ್ಳಲಾಯಿತು.

ಬೆಟ್ಟದ ಪ್ರವೇಶದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್, ದಸರಾ ಮಹೋತ್ಸವ ಮನಸಿಗೆ ತೃಪ್ತಿ ತಂದಿದೆ. ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ತಂದೆ ತಾಯಿ ಆಶೀರ್ವಾದ, ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ದಸರಾ ಮಹೋತ್ಸವ ಸುಸೂತ್ರವಾಗಿ ನೆರವೇರಿದೆ. ಎಲ್ಲರಿಗೂ ಈ ಮೂಲಕ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಉತ್ಸವ ಮೂರ್ತಿಗೆ ಚಾಲನೆ ನೀಡುವ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮೂಡಾ ಅಧ್ಯಕ್ಷ ರಾಜೀವ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್, ನಿಗಮ ಮಂಡಳಿಗಳ ಅಧ್ಯಕ್ಷರು, ಮುಖಂಡರು  ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News