ರಾಜ್ಯ ಸರ್ಕಾರ ಧಾರ್ಮಿಕ ಆಚರಣೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದೆ: ಪ್ರೊ. ನಂಜರಾಜ ಅರಸ್

Update: 2021-10-15 09:39 GMT

ಮೈಸೂರು: ಸರ್ಕಾರ ಯಾವುದೇ ಧಾರ್ಮಿಕ ಆಚರಣೆ ಮಾಡುವ ಹಾಗೆ ಇಲ್ಲ, ಆದರೆ ರಾಜ್ಯ ಸರ್ಕಾರ ಧಾರ್ಮಿಕ ಆಚರಣೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದೆ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಆಕ್ರೋಶ ವ್ಯಕ್ತಪಡಿಸಿದರು.

ದಸರಾ ಆಚರಣೆ ಏನಿದ್ದರು ಅರಮನೆಗೆ ಸೀಮಿತ ಅವರು ಅವರ ಮನೆಯೊಳಗೆ ಧಾರ್ಮಿಕ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಸರ್ಕಾರ ಏಕೆ ಚಾಮುಂಡೇಶ್ವರಿ ಮೆರವಣಿಗೆ ಮಾಡಬೇಕು ಎಂದು ಪ್ರಶ್ನಿಸಿದರು. ಸರ್ಕಾರ ಚಾಮುಂಡೇಶ್ವರಿ ಮೆರವಣಿಗೆ ಮಾಡಿದಂಗೆ ಏಸು ಕ್ರಿಸ್ತ, ಪೈಗಂಬರ್ ಮತ್ತು ಬುದ್ಧನ ಮೆರವಣಿಗೆ ಮಾಡಲಿ ಸವಾಲು ಹಾಕಿದರು.

ಚಾಮುಂಡಿ ಬೆಟ್ಟದಿಂದ ಶ್ರೀಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆವರೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಿಕೊಂಡು ಬಂದರೆ ಕೊರೋನ ಬರುವುದಿಲ್ಲ, ಅರಮನೆಯಿಂದ ಬನ್ನಿಮಂಟಪದ ವರೆಗೆ ಮೆರವಣಿಗೆ ಹೋದರೆ ಕೊರೋನ ಬರುತ್ತದೆ. ಇದು ತಲೆ ಇಲ್ಲದ ಜನಪ್ರತಿನಿಧಿಗಳ ನಿರ್ಧಾರ ಎಂದು ಕಿಡಿಕಾರಿದರು.

ಚಾಮುಂಡಿ ಬೆಟ್ಟದಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿ ಯನ್ನು ಮೆರವಣಿಗೆ ಮೂಲಕ ಅರಮನೆಗೆ ತಂದಿರುವುದು ಸ್ವಾಗತಾರ್ಹ ಆದರೆ ಆನೆ ಮೇಲೆ ನಡೆಯುವ ಉತ್ಸವ ಮೂರ್ತಿಯ ಮೆರವಣಿಗೆಗೆ ಏಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಮೈಸೂರು ನಗರದಾದ್ಯಂತ ನೂರಾರು ಕಿ.ಮೀ. ದೀಪಲಂಕಾರ ಮಾಡಿ ವಿಜೃಂಭಿಸಲಾಗುತ್ತಿದೆ. ಅದನ್ನು ಬಂದು ಸಾರ್ವಜನಿಕರು ನೋಡಿ ಸೆಲ್ಫಿ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳುತ್ತಾರೆ. ಮತ್ತೊಂದು ಕಡೆ ನಮ್ಮ ಕಲೆ ಸಂಸ್ಕೃತಿಗಳನ್ನು ನೋಡಲು ಅವಕಾಶ ನೀಡುವುದಿಲ್ಲ, ಇದೊಂದು ತರಹ ಇಬ್ಬಂದಿ ನೀತಿ ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News