ಬಿಜೆಪಿ-ಕಾಂಗ್ರೆಸ್‍ನವರ ಬಳಿ ಸಿಡಿ ಫ್ಯಾಕ್ಟರಿ ಇದೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Update: 2021-10-15 12:37 GMT
ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ, ಅ.15: ಬಿಜೆಪಿಯ ಒಬ್ಬರದ್ದು ಹಾಗೂ ಕಾಂಗ್ರೆಸ್‍ನವರ ಒಬ್ಬರದ್ದು ಸಿಡಿ ತಯಾರಿಸುವ ಫ್ಯಾಕ್ಟರಿ ಇದೆ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ನನ್ನ ಸಿಡಿ ಇದ್ದರೆ ಅದನ್ನು ಬಿಡುಗಡೆ ಮಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋ ವೈರಲ್ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ನನ್ನ ಫೋಟೋ ವೈರಲ್ ಮಾಡುತ್ತಿರುವವರು ಯಾರೂ ಎಂಬ ಮಾಹಿತಿಗೆ ನನಗಿದೆ. ಅವರಿಗೆಲ್ಲ ತಕ್ಕ ಶಾಸ್ತಿ ಆಗಲಿದೆ ಎಂದರು.

ಈ ಫೋಟೋ ವೈರಲ್ ಮಾಡುವ ವಿಚಾರದಲ್ಲಿ ಎಲ್ಲ ಪಕ್ಷದವರು ಇದ್ದಾರೆ. ನನ್ನ ವಿರುದ್ಧ ಏನೇ ಅಪಪ್ರಚಾರಗಳನ್ನು ಮಾಡಿದರೂ ನನಗೆ ಅವಕಾಶ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರಾದರೂ ವಿಡಿಯೋ ಕಾಲ್ ಮಾಡಿದಾಗ ಕಾರ್ಯಕರ್ತರ ಒತ್ತಾಯಕ್ಕೆ ಕೆಲವೊಮ್ಮೆ ನಾನು ರಿಸೀವ್ ಮಾಡುತ್ತೇನೆ. ಅದನ್ನೆ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಯತ್ನಾಳ್ ದೂರಿದರು.

ರಾಜ್ಯದ ಪೊಲೀಸ್ ಇಲಾಖೆಯವರು ಸಮರ್ಥರಿದ್ದಾರೆ. ಈ ಕುರಿತು ತನಿಖೆ ಮಾಡುತ್ತಾರೆ. ಯಾರು ಬೆಳೆಯುತ್ತಿದ್ದಾರೆ, ಯಾರು ನೇರವಾಗಿ ಮಾತನಾಡುತ್ತಾರೆ, ಅಂತವರನ್ನು ತುಳಿಯುವ ಪ್ರಯತ್ನ ಇದಾಗಿದೆ. ಇಂತಹ ನೂರು ಆರೋಪ ಬಂದರೂ ಎದುರಿಸುವ ಶಕ್ತಿ ನನಗಿದೆ. ಈ ಷಡ್ಯಂತ್ರದ ಹಿಂದಿರುವ ಕಳ್ಳರು ಶೀಘ್ರವೇ ಜನರ ಎದುರು ಬೆತ್ತಲಾಗುತ್ತಾರೆ ಎಂದು ಅವರು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News