ಕಿರಗೂರು: ಆಸ್ತಿಗಾಗಿ ಕುಟುಂಬ ಕಲಹ; ಇಬ್ಬರಿಗೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

Update: 2021-10-15 13:18 GMT
                                                                         ಮಧು

ಮಡಿಕೇರಿ ಅ.15 : ದಾಯಾದಿ ಕಲಹವೊಂದು ಕೊಲೆ ಮತ್ತು ಆತ್ಮಹತ್ಯೆಯಲ್ಲಿ ಅಂತ್ಯವಾಗಿದ್ದು, ಅಡಿಕೆ ಫಸಲಿನ ಮೇಲಿನ ಆಸೆ ಮೂರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇಬ್ಬರು ಗುಂಡೇಟಿಗೆ ಸಿಲುಕಿ ಸಾವನ್ನಪ್ಪಿದ್ದರೆ, ಗುಂಡು ಹೊಡೆದವನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕೊಡಗಿನ ಕಿರಗೂರು ಗ್ರಾಮದಲ್ಲಿ ನಡೆದಿದೆ. 

ಪೊನ್ನಂಪೇಟೆ ತಾಲೂಕಿನ ಕಿರಗೂರು ಗ್ರ್ರಾಮದ ಅಲೆಮಾಡ ಕುಟುಂಬದ ಮಧು(42) ಹಾಗೂ ಯಶೋಧ(63) ಎಂಬುವವರು ಗುಂಡೇಟಿನಿಂದ ಸಾವನ್ನಪ್ಪಿರುವ ದುರ್ದೈವಿಗಳು. ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅಲೆಮಾಡ ಸೋಮಯ್ಯ ಸಾಗರ್(52) ಗುಂಡು ಹೊಡೆದವನು ಎಂದು ತಿಳಿದು ಬಂದಿದೆ.

ಕಿರಗೂರು ಗ್ರಾಮದಲ್ಲಿರುವ ತೋಟದ ಅಡಿಕೆ ಫಸಲಿನ ವಿಚಾರಕ್ಕೆ ಸಂಬಂಧಿಸಿದಂತೆ ಸೋಮಯ್ಯ ಸಾಗರ್ ಹಾಗೂ ಆತನ ಚಿಕ್ಕಪ್ಪನ ಮಗ ಮಧು ನಡುವೆ ಕಲಹವೇರ್ಪಟ್ಟಿತ್ತು. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಸಾಗರ್ ಕೋವಿಯಿಂದ ಮಧುವಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಸಂದರ್ಭ ತಡೆಯಲು ಬಂದ ಸಾಗರ್ ಪತ್ನಿ ಯಶೋಧಳಿಗೂ ಗುಂಡೇಟು ತಗುಲಿದೆ.

 ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಯಶೋಧಳನ್ನು ತುರ್ತು ಚಿಕಿತ್ಸ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ದುಷ್ಕೃತ್ಯವೆಸಗಿದ ಬಳಿಕ ಸಾಗರ್ ಮನೆ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಶೋಧ ಟಿ.ಶೆಟ್ಟಿಗೇರಿ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 
ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ಹಾಗೂ ಪೊನ್ನಂಪೇಟೆ ಪೊಲೀಸ್ ಠಾಣಾ ಎಸ್‍ಐ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News