×
Ad

ಮೈಶುಗರ್ ಸಕ್ಕರೆ ಕಾರ್ಖಾನೆ ಬಗ್ಗೆ ಅ.18ರಂದು ಅಂತಿಮ ನಿರ್ಣಯ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-15 19:20 IST

ಮಂಡ್ಯ, ಅ.15: ಮೈಶುಗರ್  ಸಕ್ಕರೆ ಕಾರ್ಖಾನೆ ಆರಂಭ ಸಂಬಂಧ ಅ.18 ರಂದು ಚರ್ಚಿಸಿ ಇದಕ್ಕೆ ಒಂದು ಅಂತ್ಯ ಹಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೈಶುಗರ್  ಸಕ್ಕರೆ ಕಾರ್ಖಾನೆಯನ್ನು ಸರಕಾರಿ ಸ್ವಾಮ್ಯದಲ್ಲೇ ನಡೆಸುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ 33 ದಿನದಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

18 ರಂದು ರೈತ ನಾಯಕರು, ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಿ ಕಾರ್ಖಾನೆ ಭವಿಷ್ಯದ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳುವ. ಸ‌ಭೆಗೆ ಬನ್ನಿ ಎಂದು ಅವರು ಆಹ್ವಾನ ನೀಡಿದ್ದಾರೆ.

ಮೈಷುಗರ್ ಕಾರ್ಖಾನೆ ಇತಿಹಾಸ ಹೊಂದಿದೆ. ಮಂಡ್ಯ ಅಂದರೆ ಸಕ್ಕರೆ ನಾಡು. ಸಕ್ಕರೆ ನಾಡಿನಲ್ಲಿ ಈ ಕಾರ್ಖಾನೆ ಉಳಿಯಬೇಕು. ಕಬ್ಬು ನುರಿಸಿದರೆ ಮಾತ್ರ ಮಂಡ್ಯಕ್ಕೆ ಹೆಸರು. ರೈತರ ಕಬ್ಬು ನುರಿಸುವ ಕೆಲಸ ಆಗಬೇಕು.18ರಂದು ಇದಕ್ಕೆ ಒಂದು ಅಂತ್ಯ ಹಾಡೋಣ ಎಂದು ಅವರು ಹೇಳಿದರು.

ಕಾರ್ಖಾನೆಗೆ ನೂರಾರು ಕೋಟಿ ಅನುದಾನವನ್ನು ನೀಡಲಾಗಿದೆ. ಆದರೆ, ಮುಂದುವರೆಯುತ್ತಿಲ್ಲ ಎಂದು ವಿಷಾದಿಸಿದ ಬೊಮ್ಮಾಯಿ, ಒಂದು ಬಾರಿ ಕಾರ್ಖಾನೆ ಆರಂಭವಾದರೆ ಮತ್ತೆ ನಿಲ್ಲಬಾರದು. ಆ ರೀತಿಯ ತೀರ್ಮಾನಕ್ಕೆ ಬರೋಣ ಎಂದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸುನಂದಾ ಜಯರಾಂ, ಕೆ.ಬೋರಯ್ಯ, ಸಿ.ಕುಮಾರಿ, ಎಂ.ಬಿ.ಶ್ರೀನಿವಾಸ್, ಮಂಜುನಾಥ್, ಎಂ.ಎಸ್.ಚಿದಂಬರ್, ಇಂಡುವಾಳು ಚಂದ್ರಶೇಖರ, ಇತರೆ ಮುಖಂಡರು ಉಪಸ್ಥಿತರಿದ್ದರು.

ರೈತರ ಮನವಿ:

ಸರಕಾರಿ ಸ್ವಾಮ್ಯದಲ್ಲೇ ಮೈಶುಗರ್  ಸಕ್ಕರೆ ಕಾರ್ಖಾನೆಯನ್ನು ಶೀಘ್ರದಲೇ ಆರಂಭಿಸಬೇಕು. ಶತಮಾನದ ಮಂಡ್ಯದ ಕಬ್ಬು ಸಂಶೋಧನ ಕೇಂದ್ರವನ್ನು ಮಂಡ್ಯದಿಂದ ಸ್ಥಳಾಂತರ ಮಾಡಬಾರದು. ಸಕ್ಕರೆ ಆಯುಕ್ತರ ಕಛೇರಿಯನ್ನು ಆಡಳಿತಾತ್ಮಕ ಕಾರಣಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲೇ ಇರಿಸಬೇಕು. ಉತ್ತರ ಕರ್ನಾಟಕದಲ್ಲಿ ಉಪ ಕಛೇರಿ ತರೆದು ದಕ್ಷಿಣ ಹಾಗೂ ಉತ್ತರ ಭಾಗಗಳಿಗೆ ಸಮಾನಂತರ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. 

2021 -2022ನೇ ಸಾಲಿನಲ್ಲಿ ಕೇಂದ್ರ ಸರಕಾರ, ಕಬ್ಬಿನ ಎಫ್.ಆರ್.ಪಿ. ದರವನ್ನು ಕೆ.ಜಿಗೆ 5 ಪೈಸೆ ಹೆಚ್ಚಿಸಿ ಶೇ.10 ಸಕ್ಕರೆ ಇಳುವರಿ ಆಧಾರದ ಮೇಲೆ ಟನ್ ಕಬ್ಬಿಗೆ 2900 ರೂ. ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಶೇ.85 ಸಕ್ಕರೆ ಇಳುವರಿ ಆಧಾರದ ಮೇಲೆ ಟನ್‌ಗೆ 3500 ರೂ. ನಿಗಧಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಿ ಕಬ್ಬು ಬೆಳೆಗಾರ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಹಾಗೂ ರಾಜ್ಯ ಸರಕಾರದ ಪ್ರೋತ್ಸಾಹ ಧನವನ್ನು ಸಹ ನಿಗಧಿ ಮಾಡಬೇಕು.

2018-2019, 2019-2020, 2020-2021ನೇ ಸಾಲಿನಲ್ಲಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಮೈಷುಗರ್ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು  ಪಕ್ಕದ ಬೇರೆ ಬೇರೆ ಕಾರ್ಖಾನೆಗಳಿಗೆ ಸರಬರಾಜು ಮಾಡಿರುವ  ಸಾಗಾಣಿಕೆ ವೆಚ್ಚ ಸುಮಾರು 50 ಕೋಟಿ ರೂ.ಗಳನ್ನು ಭರಿಸಬೇಕು ಎಂದು ಸಿಎಂ ಬಳಿ ರೈತರು ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News