ಯಾತಕ್ಕಾಗಿ ನಿಮಗೆ ಮತ ನೀಡಬೇಕೆಂದು ಬಿಜೆಪಿ ನಾಯಕರಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ: ಸಲೀಮ್ ಅಹ್ಮದ್

Update: 2021-10-15 14:25 GMT

ಬೆಂಗಳೂರು, ಅ.15: ರಾಜ್ಯದ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಾತಕ್ಕಾಗಿ ನಿಮಗೆ ಮತ ನೀಡಬೇಕು ಎಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಜನತೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಹೇಳಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 55 ರೂ. ಇದ್ದ ಪೆಟ್ರೋಲ್ 108 ರೂ.ಮಾಡಿದ್ದಕ್ಕಾ, 50 ರೂ. ಇದ್ದ ಡೀಸೆಲ್ 100 ರೂ. ಮಾಡಿದ್ದಕ್ಕಾ, ಕಪ್ಪುಹಣ ತಂದು ಪ್ರತಿಯೊಂದು ಖಾತೆಗೂ 15 ಲಕ್ಷ ರೂ. ಹಾಕುತ್ತೇವೆ ಎಂದು ಸುಳ್ಳು ಹೇಳಿದ್ದಕ್ಕಾ? ರಾಜ್ಯಕ್ಕೆ ಬರಬೇಕಾಗಿದ್ದ ಹಣ ತರದಿರುವುದಕ್ಕಾ? ಯಾವುದಕ್ಕೆ ನಾವು ಬಿಜೆಪಿಗೆ ಮತ ಹಾಕಬೇಕು? ಎಂದು ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.

ಹಾನಗಲ್ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡು ಕಳೆದ ಒಂದು ವಾರದಿಂದ ಸ್ಥಳೀಯವಾಗಿ ಸಭೆ, ಸಂಘಟನೆ ಮಾಡುತ್ತಿದ್ದೇನೆ. ಆಂತರಿಕ ಸಭೆಯಲ್ಲಿ ಹಾನಗಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಸಲೀಮ್ ಅಹ್ಮದ್ ಹೇಳಿದರು.

ನಾಳೆ ಮತ್ತು ನಾಡಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ 18ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾನಗಲ್‍ಗೆ ಬರುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅ.19ರಂದು ಸಿಂದಗಿ ಹಾಗೂ 20ರಂದು ಹಾನಗಲ್‍ನಲ್ಲಿ ಪ್ರಚಾರ ಮಾಡಲಿದ್ದಾರೆ. ಹೀಗೆ 27ರವರೆಗೂ ನಿರಂತರವಾಗಿ ಚುನಾವಣಾ ಪ್ರಚಾರ ನಡೆಯಲಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಸರಕಾರದಿಂದ ಜನ ಭ್ರಮನಿರಸನರಾಗಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯ ಈ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ. ಜನ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವ ವಿಶ್ವಾಸವಿದೆ ಎಂದು ಸಲೀಮ್ ಅಹ್ಮದ್ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಎಂದಿದ್ದರು. ಅವರು ಸ್ವರ್ಗ ತೋರಲಿಲ್ಲ, ನರಕ ತೋರಿಸಿದ್ದಾರೆ. ಕೋವಿಡ್ ಸಂದÀರ್ಭದಲ್ಲಿ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸರಕಾರ 37 ಸಾವಿರ ಎಂದು ಸುಳ್ಳು ಹೇಳಿದೆ. ಹೀಗಾಗಿ ಮತ ಕೇಳಲು ಬಿಜೆಪಿ ನೈತಿಕತೆ ಕಳೆದುಕೊಂಡಿದೆ. ಹೀಗಾಗಿ ಜನ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಸಲೀಮ್ ಅಹ್ಮದ್ ಹೇಳಿದರು.

ಕೇಂದ್ರದ ನಾಲ್ವರು ಸಚಿವರು ಕಳೆದ ತಿಂಗಳು ಜನಾಶೀರ್ವಾದ ಯಾತ್ರೆ ಮಾಡಿದ್ದರು. ಅವರು ರಾಜ್ಯಕ್ಕೆ ಮಾಡಿರುವ ಅನ್ಯಾಯಕ್ಕೆ ಕ್ಷಮೆ ಕೋರುವ ಯಾತ್ರೆ ಮಾಡಬೇಕಿತ್ತು. ಜನ ಇಂದು ಬಿಜೆಪಿ ವಿರುದ್ಧ ಆಕ್ರೋಶ ಯಾತ್ರೆ ಮಾಡಲಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ಸರಕಾರದ ವೈಫಲ್ಯಗಳಿಂದಾಗಿ ಜನ ಕಾಂಗ್ರೆಸ್‍ಗೆ ಮತ ಹಾಕಲಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಶಾಸಕರೇ ತಮ್ಮದು 30 ಪರ್ಸೆಂಟ್ ಸರಕಾರ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಉತ್ತರ ನೀಡಬೇಕು. ಬಿಜೆಪಿ ಭ್ರಷ್ಟಾಚಾರ ಇಂದು ಎಲ್ಲರ ಮನೆ ಮಾತಾಗಿದೆ. ಯಡಿಯೂರಪ್ಪ ಕಣ್ಣೀರು ಹಾಕಿದ್ದು ಯಾಕೆ? ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದಿದ್ದಕ್ಕೆ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಿದರೋ? ಅಥವಾ ಹಿರಿಯರನ್ನು ಕಸದ ಬುಟ್ಟಿಗೆ ಎಸೆಯುವ ಸಂಸ್ಕøತಿಯನ್ನು ಮುಂದುವರಿಸಿದ್ದಾರೋ? ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಉತ್ತರಿಸಬೇಕು ಎಂದು ಸಲೀಮ್ ಅಹ್ಮದ್ ಪ್ರಶ್ನಿಸಿದರು.
 
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News