ಅ.21ರಿಂದ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿಗಳನ್ನು ತೆರೆಯಲು ಎನ್‍ಸಿಇಇ ಆಗ್ರಹ

Update: 2021-10-15 15:06 GMT

ಬೆಂಗಳೂರು, ಅ. 15: `ಇದೇ ತಿಂಗಳ 21ರಿಂದ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಗಳನ್ನು ತೆರೆಯಿರಿ. ಶಾಲೆಗಳನ್ನು ಸುರಕ್ಷಿತವಾಗಿ ಪುನಃ ತೆರೆಯಲು ಮತ್ತು ಮಕ್ಕಳಿಗೆ ಕಲಿಕೆಯನ್ನು ಪುನರಾರಂಭಿಸಲು ಸಹಾಯ ಆಗುವ ರೀತಿಯಲ್ಲಿ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು' ಎಂದು ರಾಷ್ಟ್ರೀಯ ಶಿಕ್ಷಣ ತುರ್ತು ಒಕ್ಕೂಟ(ಎನ್‍ಸಿಇಇ) ಮುಖ್ಯಸ್ಥ ಹಾಗೂ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಆಗ್ರಹಿಸಿದ್ದಾರೆ.

`ಮಕ್ಕಳನ್ನು ಶಾಲೆಗೆ ಕಳುಹಿಸಲು ಇಚ್ಛಿಸದ ಪೋಷಕರಿಗೆ ಒತ್ತಾಯಿಸಬಾರದು. ಆದರೆ, ಶಾಲೆಯಿಂದಾಗುವ ಪ್ರಯೋಜನಗಳ ಬಗ್ಗೆ ಸಾಕ್ಷ್ಯವನ್ನು ಅವರಿಗೆ ತಿಳಿಸಬೇಕು. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸುವ ಹೆಚ್ಚಿನ ಪೋಷಕರು ಅವಕಾಶದಿಂದ ವಂಚಿತರಾಗಬಾರದು. ಕೆಲವೇ ಪೋಷಕರು ಶಾಲೆಗೆ ಕಳಿಸಲು ಇಷ್ಟ ಪಡದಿದ್ದರೆ, ಅದರಿಂದಾಗಿ ಎಲ್ಲ ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕನ್ನು ನಿರಾಕರಿಸಲಾಗದು ಎಂದು ಅವರು ಸಲಹೆ ಮಾಡಿದ್ದಾರೆ.

ಶಾಲೆ ಪ್ರಾರಂಭಿಸಲು ಸಲಹೆಗಳು: ಶಾಲೆಯ ಪುನರಾರಂಭದ ಯೋಜನೆಗಳಲ್ಲಿ ಪೋಷಕರು ಮತ್ತು ಅವರನ್ನು ತೊಡಗಿಸಿಕೊಳ್ಳಿ, ಪ್ರತಿ ಮಗುವನ್ನು ಶಾಲೆಗೆ ಮರಳಿ ಕರೆತನ್ನಿ. ಶಾಲೆಗಳನ್ನು ಸುರಕ್ಷಿತವಾಗಿ ತೆರೆಯಿರಿ. ಆರೋಗ್ಯ ಮತ್ತು ನೈರ್ಮಲ್ಯ ಕ್ರಮಗಳು ಮತ್ತು ಶಿಕ್ಷಕರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ಒದಗಿಸಿ, ಪೌಷ್ಟಿಕಾಂಶದ ಪೂರಕವಾದ ಮೊಟ್ಟೆ, ಹಾಲು ಮತ್ತು ಚಿಕ್ಕಿಗಳನ್ನು ಒದಗಿಸಿ. ವಿದ್ಯಾರ್ಥಿಗಳ ಸಾಮಾಜಿಕ-ಭಾವನಾತ್ಮಕ ಯೋಗಕ್ಷೇಮವನ್ನು ಬೆಂಬಲಿಸಲು ಮತ್ತು ಕಲಿಕೆಯ ಅಂತರವನ್ನು ಪರಿಹರಿಸಲು ಶಾಲೆಗಳು ಮತ್ತು ಶಿಕ್ಷಕರಿಗೆ ಪರಿಣಾಮಕಾರಿ  ನವೀನ ತಂತ್ರಗಳನ್ನು ವಿನ್ಯಾಸಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಶಿಕ್ಷಣ ಸಚಿವರ ಘೋಷಣೆಯನ್ನು ಸ್ವಾಗತಿಸುತ್ತೇವೆ. ದೀರ್ಘಕಾಲ ಶಾಲೆ ಮುಚ್ಚುವುದು, ಮಕ್ಕಳ ಶೈಕ್ಷಣಿಕ, ಭಾವನಾತ್ಮಕ, ಪೌಷ್ಟಿಕ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಮೇಲೆ ದುರಂತದ ಪರಿಣಾಮಗಳನ್ನು ಉಂಟುಮಾಡಿದೆ.

ಎಲ್‍ಪಿಎಸ್‍ನಲ್ಲಿರುವ ಮಕ್ಕಳಿಗೆ ಅಪೌಷ್ಟಿಕತೆ, ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಮತ್ತು ಶಾಲೆಯಿಂದ ಹೊರಗುಳಿಯುವಿಕೆಯ ವಿಷಯದಲ್ಲಿ ಹಾನಿಯು ಗರಿಷ್ಠವಾಗಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 116 ದೇಶಗಳಲ್ಲಿ 101ನೆ ಸ್ಥಾನದಲ್ಲಿದೆ ಮತ್ತು ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ನೀಡುವುದು ಅವರ ಪೋಷಣೆಗೆ ಮುಖ್ಯವಾಗಿದೆ. ಚಿಕ್ಕ ಮಕ್ಕಳು ಕೋವಿಡ್ ವೈರಸ್‍ಗೆ ತುತ್ತಾಗುವುದು ಮತ್ತು ಪ್ರಕರಣಗಳು ಮತ್ತು ಸಾವು-ನೋವುಗಳು ಅತ್ಯಲ್ಪವೆಂದು ನಿರ್ಣಾಯಕ ಪುರಾವೆಗಳು ಇರುವುದರಿಂದ ಶಾಲೆಗಳನ್ನು ತೆರೆಯುವುದರಿಂದಾಗುವ ಹಾನಿ ಕನಿಷ್ಠದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯೇ ಶಾಲೆಗಳನ್ನು ಪ್ರಾರಂಭಿಸಲು ಶಿಫಾರಸ್ಸು ಮಾಡಿರುವಾಗ ಮತ್ತೊಮ್ಮೆ ಈ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುವುದ ಸರಿಯಲ್ಲ. ರಾಜ್ಯಾದ್ಯಂತ ಪೋಷಕರು ಶಾಲೆಗಳನ್ನು ತೆರೆಯಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಒಂದು ಅಧ್ಯಯನವು ಶೇ.95ರಷ್ಟು ಗ್ರಾಮೀಣ ಪೋಷಕರು ಶಾಲೆಗಳನ್ನು ತೆರೆಯಬೇಕೆಂದು ಬಯಸುತ್ತಾರೆ. ಪೋಷಕರು ತಮ್ಮ ಮಕ್ಕಳು ಕಲಿಕೆಯ ಅವಕಾಶಗಳನ್ನು ಆದಷ್ಟು ಶೀಘ್ರವಾಗಿ ಪಡೆಯಬೇಕೆಂದು ಬಯಸುತ್ತಾರೆ. 

ಶಾಲೆಗಳು ದೀರ್ಘ ಕಾಲ ಮುಚ್ಚಿರುವುದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರು ತಮ್ಮ ಮಕ್ಕಳಿಗೆ ಪೌಷ್ಟಿಕವಾದ ಬಿಸಿ ಬೇಯಿಸಿದ ಊಟವನ್ನು ಬಯಸುತ್ತಾರೆ. ಜೊತೆಗೆ, ಶಾಲೆಗೆ ಮಕ್ಕಳು ಹಾಜರಾಗುವುದು ಇಲಾಖೆಯ ನಿಯಮದಂತೆ ಐಚ್ಛಿಕವಾಗಿರುವುದರಿಂದ, ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಇಷ್ಟವಿಲ್ಲದ ಪೋಷಕರು ಅವರನ್ನು ಮನೆಯಲ್ಲಿಯೇ ಇರಿಸಿಕೊಳ್ಳಬಹುದು. ಹಾಗಾಗಿ ಶಾಲೆ ತೆರೆಯುವುದನ್ನು ಮತ್ತಷ್ಟು ವಿಳಂಬ ಮಾಡಲು ಯಾವುದೇ ಸಕಾರಣವಿಲ್ಲ ಹಾಗು ವಿಳಂಬ ಮಕ್ಕಳ ಬದುಕಿಗೆ ಹಾನಿಕರವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News