ರಂಗೇರುತ್ತಿರುವ ಉಪಚುನಾವಣಾ ಸಮರ: ಸಿಎಂ, ಮಾಜಿ ಸಿಎಂಗಳು ಅಖಾಡಕ್ಕೆ

Update: 2021-10-15 16:17 GMT

ಬೆಂಗಳೂರು, ಅ. 15: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪ್ರತಿಷ್ಟೆ, ಪೈಪೋಟಿ ಸೃಷ್ಟಿಸಿರುವ ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದೆ.

ಇದೇ ತಿಂಗಳ 30ಕ್ಕೆ ಉಪಚುನಾವಣಾ ಮತದಾನ ನಡೆಯಲಿದ್ದು, ಈಗಾಗಲೇ ಎರಡು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ, ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಕ್ಷೇತರರು ಸೇರಿದಂತೆ ಒಟ್ಟು 19 ಮಂದಿ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ನಾಳೆ(ಅ.17)ಯಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಸಚಿವರು, ಶಾಸಕರು ಪ್ರಚಾರದ ಅಖಾಡಕ್ಕೆ ಧುಮಕಲಿದ್ದಾರೆ.

ಎರಡೂ ಕ್ಷೇತ್ರಗಳಲ್ಲೂ ಮೂರು ಪಕ್ಷಗಳ ಘಟಾನುಘಟಿ ನಾಯಕರು ಅಬ್ಬರದ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದು, ಚುನಾವಣಾ ಕಣ ರಂಗೇರಲಿದೆ. ಈ ಉಪಚುನಾವಣೆ ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯೇ ಸರಿ. ತಮ್ಮ ತವರು ಜಿಲ್ಲೆಯಲ್ಲಿ ಮತ್ತು ಸಿಎಂ ಆದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ ಸಹಜವಾಗಿಯೇ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತಮ್ಮ ನಾಯಕತ್ವವನ್ನು ಭದ್ರಪಡಿಸಿಕೊಳ್ಳುವ ಉಮೇದಿನಲ್ಲಿ ಬೊಮ್ಮಾಯಿ ಇದ್ದಾರೆ.

ಉಪಚುನಾವಣೆಯ ಗೆಲುವಿಗಾಗಿ ಬಿಜೆಪಿ ತನ್ನದೇ ಆದ ರಣತಂತ್ರಗಳನ್ನು ರೂಪಿಸಿ ಹಲವು ಸಚಿವರುಗಳಿಗೆ ಚುನಾವಣೆ ಉಸ್ತುವಾರಿ ಹಂಚಿಕೆ ಮಾಡಿದೆ. ಹಾಗೆಯೇ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಲ್ಲ ನಾಯಕರುಗಳು ಒಟ್ಟಾಗಿ 3 ತಂಡಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಇದೇ ವೇಳೆ ಪ್ರತಿಪಕ್ಷ ಈ ಉಪಚುನಾವಣೆಯಲ್ಲಿ ಪ್ರತಿಷ್ಟೆಯಾಗಿಯೇ ಸ್ವೀಕರಿಸಿದ್ದು, ಗೆಲ್ಲುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಹೊಸ ಭಾಷ್ಯ ಬರೆಯುವ ತವಕದಲ್ಲಿ ಗೆಲುವಿಗಾಗಿ ಶತಪ್ರಯತ್ನ ನಡೆಸಿದೆ.

ಈ ನಡುವೆಯೇ ಜೆಡಿಎಸ್ ಎರಡೂ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ತೆನೆಹೊತ್ತ ಮಹಿಳೆ ಪಕ್ಷ ಲೆಕ್ಕಕ್ಕಿಲ್ಲ ಎಂಬುವವರಿಗೆ ಬುದ್ಧಿ ಕಲಿಸುವ ಶಪಥ ತೊಟ್ಟಿರುವ ಮಾಜಿ ಸಿಎಂ ಕುಮಾರಸ್ವಾಮಿ, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಂತ್ರ ರೂಪಿಸಿದ್ದು, ಜೆಡಿಎಸ್‍ನ್ನು ಗೆಲುವಿನ ದಡ ಮುಟ್ಟಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.

ಸಿಎಂ, ಮಾಜಿ ಸಿಎಂಗಳು ಅಖಾಡಕ್ಕೆ: ಅ.17ರಿಂದ ಎರಡು ದಿನಗಳ ಕಾಲ ಹಾನಗಲ್ ಕ್ಷೇತ್ರದಲ್ಲಿ, ನಂತರ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮೊದಲ ಸುತ್ತಿನ ಪ್ರಚಾರ ನಡೆಸುವುದಾಗಿ ಪ್ರಕಟಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವರು, ಶಾಸಕರು ಸಾಥ್ ನೀಡಲಿದ್ದಾರೆ. ಇದೇ ವೇಳೆ ಮಾಜಿ ಸಿಎಂ ಯಡಿಯೂರಪ್ಪನವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧಾವಿಸುವ ಸಾಧ್ಯತೆಗಳಿವೆ.

ಈ ಮಧ್ಯೆಯೇ ಉಪಚುನಾವಣೆ ಅಭ್ಯರ್ಥಿಗಳ ಸಂಬಂಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ನಡುವೆ ವಾಗ್ಯುದ್ಧ ಆರಂಭವಾಗಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಉಭಯ ನಾಯಕರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿಯಲಿದ್ದು, ಒಂದೆರಡು ದಿನಗಳಲ್ಲಿ ಉಪಚುನಾವಣೆ ಕಣ ರಂಗೇರಲಿದೆ. ಅ.30ಕ್ಕೆ ಮತದಾನ ನಡೆಯಲಿದ್ದು, ನ.2ರಂದು ಎರಡೂ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಹೊರಬಿಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News