ಶಿವಮೊಗ್ಗದಲ್ಲಿ ವೈಭವದ ದಸರಾ ಆಚರಣೆ

Update: 2021-10-15 17:25 GMT

ಶಿವಮೊಗ್ಗ: ಶಿವಮೊಗ್ಗ ಪ್ರಮುಖ ಆಕರ್ಷಣೆಯಾದ ದಸರಾ ಈ ಬಾರಿ ಸರಳವಾಗಿ ನಡೆಯಿತು. ಕೋಟೆ ಶ್ರೀಸೀತಾರಾಮಾಂಜನೇಯ ದೇವಸ್ಥಾನದಿಂದ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಚಾಮುಂಡೇಶ್ವರಿ ದೇವಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೇಯರ್ ಸುನೀತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪಾಲಿಕೆ ಸದಸ್ಯರು, ಅಧಿಕಾರಿಗಳು ನಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ನಾಡದೇವಿ ಚಾಮುಂಡೇಶ್ವರಿಯ ಮೂರ್ತಿಗೆ ಹೂವು ಹಾಕಿ ನಮನ ಸಲ್ಲಿಸಲಾಯಿತು. ಆನೆಯ ಮೇಲೆ ಅಂಬಾರಿ ಹೊರಿಸುವ ಬದಲು ಲಾರಿಯಲ್ಲಿ ಕೊಂಡೊಯ್ಯಲಾಯಿತು. ಸಾಗರ್ ಮತ್ತು ಭಾನುಮತಿ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು. 100 ಮೀಟರ್‌ವರೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ಆನೆಗಳು ಮತ್ತೆ ವಾಪಾಸಾದವು.

ಮೆರವಣಿಗೆಯಲ್ಲಿ ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ವಾದ್ಯ ಇತರೆ ಸಾಂಪ್ರದಾಯಿಕ ತಂಡಗಳು ಭಾಗವಹಿಸಿದ್ದವು. ಕೋಟೆ ಆಂಜನೇಯ ದೇವಸ್ಥಾನದಿಂದ ಹೊರಟ ಮೆರವಣಿವೆ ಗಾಂಧಿಬಜಾರ್, ಶಿವಪ್ಪನಾಯಕ ಸರ್ಕಲ್, ನೆಹರು ರಸ್ತೆ, ದುರ್ಗಿಗುಡಿ ರಸ್ತೆ ಮೂಲಕ ಹಳೇ ಜೈಲು ಆವರಣ ಸೇರಿತು. ಮೆರವಣಿಗೆಯಲ್ಲಿ 20ಕ್ಕೂ ಹೆಚ್ಚು ನಗರದ ವಿವಿಧ ದೇವರ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು, ಬೀದಿ ಬದಿಯಲ್ಲಿ ಮಹಿಳೆಯರು, ಮಕ್ಕಳು ಮೆರವಣಿಗೆ ವೀಕ್ಷಿಸುತ್ತಾ ದೇವರಿಗೆ ಕೈಮುಗಿದು, ಬನ್ನಿ ಅರ್ಪಿಸುತ್ತಿದ್ದು ಕಂಡುಬಂತು. ಯುವಕ, ಯುವತಿಯರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಳ್ಳುವ ಮೂಲಕ ಸಂಭ್ರಮ ಪಟ್ಟರು.

ಹಳೇ ಜೈಲು ಆವರಣದಲ್ಲಿ ಬನ್ನಿ ಮಂಟಪ ನಿರ್ಮಾಣ ಮಾಡಲಾಗಿತ್ತು. ತಹಸೀಲ್ದಾರ್ ನಾಗರಾಜ್ ಬನ್ನಿ ಮರ ಕಡಿದರು. ನೆರೆದಿದ್ದ ಜನ ಪರಸ್ಪರ ಬನ್ನಿ ಹಂಚಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News