ವಿವಿಗಳಲ್ಲಿ ಸಿಂಡಿಕೇಟ್ ಸದಸ್ಯರಾಗಿ ಆರೆಸ್ಸೆಸ್ ಕಾರ್ಯಕರ್ತರ ನೇಮಕ: ಎಚ್.ಡಿ.ಕುಮಾರಸ್ವಾಮಿ ಆರೋಪ

Update: 2021-10-16 13:44 GMT

ಬೆಂಗಳೂರು, ಅ.16: ರಾಜ್ಯದಲ್ಲಿ ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇವತ್ತು ಯಾವುದಾದರೂ ಕೆಲಸ  ಆಗಬೇಕಾದರೆ, ಆರೆಸ್ಸೆಸ್ ಕಾರ್ಯಕರ್ತರಾಗಿರುವ ಸಿಂಡಿಕೇಟ್ ಸದಸ್ಯರು ಒಂದು, ಎರಡು ಲಕ್ಷ ರೂ.ಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಶನಿವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ವರ್ಷಗಳ ಹಿಂದಿನ ಆರೆಸ್ಸೆಸ್ ಬೇರೆ, ಈಗಿರುವ ಆರೆಸ್ಸೆಸ್ ಬೇರೆ. ವಿಜಯದಶಮಿ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಯನ್ನು ಗಮನಿಸಿ ಇದು ದೇಶವನ್ನು ಒಡೆಯುವ ಕೆಲಸ ಎಂದು ಕಿಡಿಗಾರಿದರು.

ದೇಶದಲ್ಲಿರುವ ಎಲ್ಲ ಹಿಂದೂ ದೇವಾಲಯಗಳನ್ನು ಇವರ ಸುರ್ಪದಿಗೆ ಕೊಡಬೇಕಂತೆ. ಹಿಂದೂ ಧರ್ಮವನ್ನು ಆರೆಸ್ಸೆಸ್‍ನವರಿಗೆ ಗುತ್ತಿಗೆ ನೀಡಿದ್ದೀವಾ? 1989-91ರ ನಡುವೆ ಎಲ್.ಕೆ.ಅಡ್ವಾಣಿ ಅವರು ನಡೆಸಿದ ರಥಯಾತ್ರೆಯಲ್ಲಿ ಇಟ್ಟಿಗೆ, ಹಣವನ್ನು ವಸೂಲು ಮಾಡಿದ್ರಲ್ಲ, ಆ ಸಂದರ್ಭದಲ್ಲಿ ಸಂಗ್ರಹವಾದ ಹಣ ಎಷ್ಟು, ಅದನ್ನು ಎಲ್ಲಿ ಇಟ್ಟಿದ್ದರು. ಬಡ್ಡಿ ಸೇರಿ ಈವರೆಗೆ ಎಷ್ಟು ಹಣ ಆಗಿದೆ ಎಂದು ಯಾರಾದರೂ ಲೆಕ್ಕ ಕೊಟ್ಟಿದ್ದಾರಾ ಎಂದು ಅವರು ಪ್ರಶ್ನಿಸಿದರು.

ಈಗ ಪುನಃ ರಾಮಮಂದಿರ ನಿರ್ಮಾಣಕ್ಕಾಗಿ ಅಮಾಯಕ ಜನರಿಂದ ದೇಣಿಗೆ ಸಂಗ್ರಹ ಮಾಡಲಾಯಿತು. ಹಿಂದುತ್ವದ ಹೆಸರಿನಲ್ಲಿ ಸಂಗ್ರಹಿಸಲಾಗುವ ಈ ಹಣಕ್ಕೆ ಯಾರನ್ನು ಉತ್ತರದಾಯಿತ್ವರನ್ನಾಗಿ ಮಾಡಬೇಕು. ರಾಮನ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಗಾರಿದರು.

ದೇಶ ಹಾಗೂ ರಾಜ್ಯದಲ್ಲಿ ಯಾವ ರೀತಿಯ ಸರಕಾರಗಳು ಇವೆ, ಯಾವ ರೀತಿಯ ವಾತಾವರಣ ಇದೆ ಅನ್ನೋದನ್ನು ಅಲ್ಪಸಂಖ್ಯಾತರು ಅರ್ಥ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಅಗತ್ಯವಿಲ್ಲ. ನಾವು ಬೆಳೆಸಿ ಕಳುಹಿಸಿರುವ ಒಬ್ಬರೇ(ಝಮೀರ್ ಅಹ್ಮದ್) ಸಾಕು ಅವರಿಗೆ ಬೇರೆಯವರು ಬೇಕಾಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯ ರೀತಿಯಲ್ಲಿ ನಾನು ಆರೋಪ ಮಾಡಿಲ್ಲ. ಅಲ್ಪಸಂಖ್ಯಾತರನ್ನು ಇವರು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ನಿಜವಾದ ವಾಸ್ತವ ಘಟನೆಗಳನ್ನು ಮುಂದಿಟ್ಟಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಮುಸ್ಲಿಮ್ ಅಭ್ಯರ್ಥಿಗಳನ್ನು ನಿಲ್ಲಿಸಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಅಲ್ಪಸಂಖ್ಯಾತರ ರಕ್ಷಣೆಗೆ ನೀವು ಏನು ಮಾಡಿದ್ದೀರಾ ಅನ್ನೋದನ್ನು ಜನ ನೋಡಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಪಕ್ಷದಲ್ಲಿ ಮುಸ್ಲಿಮ್ ಬಾಂಧವರಿಗೆ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಸಿ.ಎಂ.ಇಬ್ರಾಹಿಮ್ 1994-95ರಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಂದರು. ಹಲವರ ವಿರೋಧದ ನಡುವೆಯೂ ದೇವೇಗೌಡರು ಇಬ್ರಾಹಿಮ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿದರು. ನಂತರ ದೇವೇಗೌಡರು ಪ್ರಧಾನಿಯಾದಾಗ ಇಮ್ರಾಹಿಮ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಕೇಂದ್ರದಲ್ಲಿ ಎರಡು ಪ್ರಮುಖ ಖಾತೆಗಳ ಸಚಿವರನ್ನಾಗಿ ಮಾಡಿದ್ದರು ಎಂದು ಕುಮಾರಸ್ವಾಮಿ ಸ್ಮರಿಸಿದರು.

ಅದೇ ರೀತಿ ಮೀರಾಜುದ್ದೀನ್ ಪಟೇಲ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ, ಸಚಿವರನ್ನಾಗಿ ಮಾಡಿದರು. 2004ರಲ್ಲಿ ಇಕ್ಬಾಲ್ ಅನ್ಸಾರಿಯನ್ನು ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಸಿದ್ಧರಿರಲಿಲ್ಲ. ನನ್ನ ಒತ್ತಾಯದ ಮೇರೆಗೆ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ದೇಶದ ಇತಿಹಾಸದಲ್ಲೆ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಿದ್ದು ದೇವೇಗೌಡರು, ಮುಸ್ಲಿಮರ ಶೈಕ್ಷಣಿಕ ಪ್ರಗತಿಗಾಗಿ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಆರಂಭಿಸಿದರು ಎಂದು ಕುಮಾರಸ್ವಾಮಿ ಹೇಳಿದರು.

ಅಲ್ಪಸಂಖ್ಯಾತರ ಬಗ್ಗೆ ಜೆಡಿಎಸ್ ಬದ್ಧತೆ ಏನು ಎಂದು ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ. ಎಲ್ಲ ಸಮಾಜದವನ್ನು ಬದುಕಬೇಕು ಎಂಬುದ ನಮ್ಮ ಪಕ್ಷದ ನಿಲುವು ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News