ಬೆಂಗಳೂರು ಪ್ರಾದೇಶಿಕ ಕಾರ್ಯಾಗಾರ ಮುಚ್ಚುವ ನಿರ್ಣಯ ಅವಿವೇಕದ್ದು: ಅನಂತಸುಬ್ಬರಾವ್

Update: 2021-10-16 13:52 GMT

ಬೆಂಗಳೂರು, ಅ. 16: `ಕೆಎಸ್ಸಾರ್ಟಿಸಿ ಬೆಂಗಳೂರು ಪ್ರಾದೇಶಿಕ ಕಾರ್ಯಾಗಾರವನ್ನು ಯಾವುದೇ ಕಾರಣಕ್ಕೂ ಹಾಸನಕ್ಕೆ ಮಾಡದೇ ಬೆಂಗಳೂರಿನಲ್ಲಿ ಪ್ರಾದೇಶಿಕ ಕಾರ್ಯಾಗಾರವನ್ನು ಇಡಬೇಕು. ಜೊತೆಗೆ ಮೇಲ್ಕಂಡ ಕಾರ್ಯಾಗಾರವನ್ನು ಆಧುನಿಕರಣಗೊಳಿಸಿ ಇನ್ನೂ ಹೆಚ್ಚಿನ ಕೆಲಸ ಮಾಡುವಂತೆ ಸಜ್ಜುಗೊಳಿಸಬೇಕು' ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕಸ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಆಗ್ರಹಿಸಿದ್ದಾರೆ.

ಶನಿವಾರ ಈ ಸಂಬಂಧ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ಬೆಂಗಳೂರಿನಲ್ಲಿರುವ ಪ್ರಾದೇಶಿಕ ಕಾರ್ಯಾಗಾರ 1961ರಲ್ಲಿ ಪ್ರಾರಂಭವಾಗಿದ್ದು, ಈ ಕಾರ್ಯಾಗಾರವು ನಿಗಮದ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತಿತ್ತು. 1500ಕ್ಕೂ ಅಧಿಕ ಮಂದಿ ಕಾರ್ಮಿಕರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಿದ್ದ ಕಾರ್ಯಾಗಾರ ಇಂದು ಅದರ ಕಾಲು ಭಾಗ ನೌಕರರನ್ನು ಹೊಂದಿದೆ. ಪ್ರತಿಷ್ಠಿತ ಕಾರ್ಯಾಗಾರ ಮುಚ್ಚಲು ಹಾಗೂ ಹಾಸನ ಕಾರ್ಯಾಗಾರ ಆಧುನಿಕರಣಗೊಳಿಸಲು ಆಡಳಿತ ವರ್ಗ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

ಸಂಸ್ಥೆಯ ಭವಿಷ್ಯ ಮತ್ತು ಅದರ ಪ್ರತಿಷ್ಠೆ ನೌಕರರ ಕೆಲಸದ ಭದ್ರತೆ, ಅವರ ವೇತನಗಳ ಪ್ರಶ್ನೆ ಅಡಕವಾಗಿರುವುದರಿಂದ ಈ ಕುರಿತು ನಮ್ಮೊಂದಿಗೆ ಚರ್ಚಿಸಬೇಕಿತ್ತು. ನಾಲ್ಕೂ ನಿಗಮಗಳ ಸಾಲದ ಕೂಪದಲ್ಲಿ ಮುಳುಗಿವೆ. 60 ವರ್ಷ ಕೆಲಸ ಮಾಡಿರುವ ಸಂಸ್ಥೆ ಆಪದ್ಧನ ಇಲ್ಲ. ಎಲ್ಲವೂ ಸರಕಾರದ ನೆರವಿನ ಮೇಲೆ ನಿಂತಿದೆ. ಹಾಸನ ರಾಜ್ಯಕ್ಕೆ ಕೇಂದ್ರ ಸ್ಥಳವಲ್ಲ. ಕಾರ್ಯಾಗಾರಕ್ಕೆ ಬೇಕಾಗಿರುವ ಎಲ್ಲ ವಸ್ತುಗಳು ಬೆಂಗಳೂರು ನಗರದಿಂದ ಹಾಸನಕ್ಕೆ ಹೋಗಬೇಕು. 

ಅಲ್ಲಿಂದ ಸಿದ್ಧವಾದ ವಸ್ತುಗಳನ್ನು ಸಾರಿಗೆ ನಿಗಮದ ಎಲ್ಲ ಕಡೆಗೂ ಸಾಗಿಸಬೇಕು. ಇಂಧನ ದರ ಗಗನಕ್ಕೂ ದಾಟಿ ಹೋಗುತ್ತಿರುವಾಗ ಇಂತಹ ದುಸ್ಸಾಹಸಕ್ಕೆ ಕೈಹಾಕುವುದು ಸೂಕ್ತವಲ್ಲ ಹಾಗೂ ಕೆಲಸಗಾರರನ್ನು ಬೆಂಗಳೂರಿನಿಂದ ಹಾಸನಕ್ಕೆ ಸ್ಥಳಾಂತರ ಮಾಡಿದರೆ ಅವರ ಮನೆ ಬಾಡಿಗೆ ಭತ್ತೆ ಕಡಿಮೆ ಆಗುವುದರಿಂದ ಅವರ ವೇತನ ಕಡಿಮೆ ಆಗುತ್ತದೆ. ಅಲ್ಲದೆ, ಈಗಾಗಲೇ ಒಂದು ಕಡೆ ನೆಲೆ ಕಂಡಿರುವ ಕೆಲಸಗಾರರಿಗೆ ಕೌಟುಂಬಿಕ ಸಮಸ್ಯೆ, ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಬೆಂಗಳೂರು ಕಾರ್ಯಾಗಾರ ಮುಚ್ಚುವುದು ಅವಿವೇಕದ ನಿರ್ಣಯ. ಆದುದರಿಂದ ಈ ನಿರ್ಣಯವನ್ನು ರದ್ದುಗೊಳಿಸಬೇಕು ಎಂದು ಅನಂತಸುಬ್ಬರಾವ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News