ಸಿಎಂ ಸಭೆ ಬಳಿಕ ಒಂದರಿಂದ 5ನೆ ತರಗತಿ ಶಾಲೆ ಆರಂಭಕ್ಕೆ ನಿರ್ಧಾರ: ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2021-10-16 14:34 GMT

ಬೆಂಗಳೂರು, ಅ. 16: `ರಾಜ್ಯದಲ್ಲಿ ಒಂದರಿಂದ ಐದನೆ ತರಗತಿ ಶಾಲೆ ಆರಂಭಕ್ಕೆ ಅಗತ್ಯವುಳ್ಳ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಿಇಒಗಳು, ಡಿಡಿಪಿಐಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕರೆದಿರುವ ಸಭೆಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಆರಂಭದ ಕುರಿತಂತೆ ನಿರ್ಧಾರ ಕೈಗೊಳ್ಳಲಿದ್ದಾರೆ. ಆ ಬಳಿಕ ಒಂದರಿಂದ 5ನೆ ತರಗತಿ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು.

ಪಠ್ಯ ಕ್ರಮ ಕಡಿಮೆ ಮಾಡುವ ಬಗ್ಗೆ ಯಾವುದೇ ಯೋಚನೆ ಇಲ್ಲ. ಶನಿವಾರ ಪೂರ್ಣದಿನ ಹಾಗೂ ರವಿವಾರವೂ ತರಗತಿ ನಡೆಸಿ ಪಠ್ಯಕ್ರಮ ಪೂರ್ಣಗೊಳಿಸುವ ಕುರಿತಂತೆ ಪರಿಶೀಲಿಸಲಾಗುತ್ತಿದೆ. ಪರೀಕ್ಷೆಗೆ ಅಗತ್ಯವಿದ್ದಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡುವ ಬಗ್ಗೆ ಜನವರಿ-ಫೆಬ್ರವರಿಯಲ್ಲಿ ನಿರ್ಧರಿಸಲಾಗುವುದು ಎಂದು ಸಚಿವ ನಾಗೇಶ್ ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಕೋವಿಡ್ ಹಿನ್ನೆಲೆಯಲ್ಲಿ ಸುದೀರ್ಘ ಅವಧಿ ಶಾಲೆಗಳನ್ನು ಮುಚ್ಚಿದ್ದು, ಇದೀಗ ರಾಜ್ಯದಲ್ಲಿ ಒಂದರಿಂದ 5ನೆ ತರಗತಿ ಪುನರಾರಂಭ ಕುರಿತಂತೆ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಶಾಲೆ ತಡವಾಗಿ ಆರಂಭ ಆಗುತ್ತಿರುವುದರಿಂದ ಶೈಕ್ಷಣಿಕ ಪಠ್ಯಕ್ರಮ ಕುಂಠಿತಗೊಂಡಿದೆ. ಹೀಗಾಗಿ ಶನಿವಾರ, ರವಿವಾರವೂ ತರಗತಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ನಾಗೇಶ್ ಇದೇ ವೇಳೆ ಸ್ಪಷ್ಟಪಡಿಸಿದರು.

ದಸರಾ ಮುಗಿದ ನಂತರ ಬಿಸಿಯೂಟ

`ದೇವರ ಅನುಗ್ರಹದಿಂದ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದೆ. ಹಲವು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೂನ್ಯ ಪ್ರಮಾಣದಲ್ಲಿದೆ. ಹೀಗಾಗಿ ತಜ್ಞರ ಅಭಿಪ್ರಾಯದಂತೆ ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭಿಸುತ್ತೇವೆ. ಜತೆಗೆ ದಸರಾ ಮುಗಿದ ತಕ್ಷಣ ಬಿಸಿಯೂಟ ಆರಂಭವಾಗಲಿದೆ. ಆಯಾ ಜಿಲ್ಲೆಯ ಅಧಿಕಾರಿಗಳು ಶಾಲೆ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ, ಮುಂದೆಯೂ ಕಡ್ಡಾಯ ಮಾಡುವುದಿಲ್ಲ. ಆನ್‍ಲೈನ್, ಆಫ್‍ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ. ಗ್ರಾಮೀಣ ಭಾಗದಲ್ಲಿ ಪ್ರೌಢಶಾಲಾ ಮಕ್ಕಳ ಹಾಜರಾತಿ ಶೇ. 90ರಷ್ಟಿದೆ'

-ಬಿ.ಸಿ.ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News