ದಾವಣಗೆರೆ: ಸಿಎಂ ನೋಡಲು ಬಂದಿದ್ದ ಬಾಲಕನಿಗೆ ಪೊಲೀಸ್ ಸಿಬ್ಬಂದಿಯಿಂದ ಹಲ್ಲೆ; ಆರೋಪ

Update: 2021-10-16 17:13 GMT

ದಾವಣಗೆರೆ : ಕಂದಾಯ ಸಚಿವರ ಗ್ರಾಮವಾಸ್ತವ್ಯ ಹಾಗೂ ಜಿಲ್ಲಾಧಿಕಾರಿ ನಡೆ- ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನೋಡಲು ಬಂದಿದ್ದ ಬಾಲಕನಿಗೆ ಪೊಲೀಸ್ ಸಿಬ್ಬಂದಿಯೊಬ್ಬ ರಕ್ತಗಾಯವಾಗುವಂತೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಘಟನೆ ಶನಿವಾರ ಜಿಲ್ಲೆಯ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಾಲಕ ನಿತಿನ್ ಎಂಬಾತ ಮುಖ್ಯಮಂತ್ರಿಯನ್ನು ನೋಡಲು ವೇದಿಕೆ ಸಮೀಪ ಹೋಗಿದ್ದಾನೆ. ಕಾರ್ಯಕ್ರಮದ ಬಂದೋ ಬಸ್ತ್ ಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಸಿಬ್ಬಂದಿ,  ಬಾಲಕನನ್ನು ಕಂಡು ಗರಂ ಆಗಿದ್ದಲ್ಲದೆ, ಅಡ್ಡಾದಿಡ್ಡಿ ಓಡಾಡುತ್ತೀಯಾ ಅಂತಾ ಗದರಿಸಿ ಬಾಲಕನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ತಲೆಗೆ ಪೆಟ್ಟು ಬಿದ್ದು ರಕ್ತ ಸುರಿಸಿಕೊಂಡು ಬಾಲಕ ಅಳುತ್ತಿದ್ದ ಹಿನ್ನೆಲೆಯಲ್ಲಿ ಮಾಧ್ಯಮದವರು ಹಾಗೂ ಗ್ರಾಮಸ್ಥರು ಪೊಲೀಸರನ್ನು ತರಾಟೆಗೆತೆಗೆದುಕೊಂಡಿದ್ದಾರೆ. ಟೋಪಿಯಲ್ಲಿರುವ ಲೋಹದಿಂದ ಏಟು ಬಿದ್ದು ಬಾಲಕನಿಗೆ ಗಾಯವಾಗಿದ್ದು, ಆರಂಭದಲ್ಲಿ ಆರೋಪ ನಿರಾಕರಿಸಿದ ಪೊಲೀಸ್ ಸಿಬ್ಬಂದಿ ಬಳಿಕ ಆಕಸ್ಮಿಕವಾಗಿ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದ್ದಾನೆ. 

ತಮ್ಮೂರಿಗೆ ಬಂದಿರುವ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಗ್ರಾಮಸ್ಥರೂ ಸಮಾಧಾನ ಮಾಡಿಕೊಂಡಿದ್ದಾರೆ. ಅಮಾಯಕ ಬಾಲಕನ ಮೇಲೆ ದರ್ಪ ತೋರಿದ ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News