ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗೆ ಇರುವ ಕಾಳಜಿಯಲ್ಲಿ ಶೇ.1ರಷ್ಟು ಎಚ್ ಡಿಕೆಗೆ ಇಲ್ಲ: ಝಮೀರ್ ಅಹ್ಮದ್

Update: 2021-10-16 17:14 GMT

ಬೆಂಗಳೂರು, ಅ.16: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದೆ. ಆದರೆ, ಅದರಲ್ಲಿ ಶೇ.1ರಷ್ಷು ಕಾಳಜಿಯೂ ಕುಮಾರಸ್ವಾಮಿಗೆ ಇಲ್ಲ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಶನಿವಾರ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '''ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಸಿ.ಎಂ ಇಬ್ರಾಹಿಂ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಝಮೀರ್ ಅಹ್ಮದ್ ಅವರು, ಇಷ್ಟು ದಿನ ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರನ್ನು ಹೊಗಳುತ್ತಾ, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಬೈಯುತ್ತಿದ್ದರು. ಈಗ ಯೂಟರ್ನ್ ಹೊಡೆದಿದ್ದಾರೆ. ಪಕ್ಷದೊಳಗೆ ಇದ್ದಾಗ ಬಾಯಲ್ಲಿ ಲಡ್ಡು ಇತ್ತಾ? ಎಂದು ಪ್ರಶ್ನಿಸಿರುವ ಅವರು,  ಆಗ ವಿರೋಧ ಮಾಡದೆ ಈಗ ಇದ್ದಕ್ಕಿದ್ದಂತೆ ಏನೇನೋ ಹೇಳಿದರೆ ಹೇಗೆ? ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ನಮ್ಮದು ಹೈಕಮಾಂಡ್ ಪಕ್ಷ, ಇಲ್ಲಿನ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತೆ. ಹೈಕಮಾಂಡ್ ನವರು ಯಾರಿಗೂ ಅನ್ಯಾಯವಾಗದಂತೆ ಸೂಕ್ತ ರೀತಿಯಲ್ಲಿ ತೀರ್ಮಾನ ಮಾಡಿದ್ದಾರೆ, ಮುಂದೆಯೂ ಮಾಡುತ್ತಾರೆ'' ಎಂದರು.

''ನಾನು 2018 ರಲ್ಲಿ ಕಾಂಗ್ರೆಸ್ ಗೆ ಸೇರಿದವನು, ಆದರೂ ನನ್ನನ್ನು ಗುರುತಿಸಿ ಸಚಿವನಾಗಿ ಮಾಡಿಲ್ವ? ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಯವರು ನಾನು ಮಂತ್ರಿಯಾಗಲು ಕಾರಣ. ಇಬ್ರಾಹಿಂ ಅವರಿಗೆ ಏನು ಅನ್ಯಾಯವಾಗಿದೆ ಎಂದು ಹೇಳಲಿ, ಅದನ್ನು ಬಿಟ್ಟು ಈ ರೀತಿ ಏನೇನೋ ಮಾತನಾಡಬಾರದು. ಹಿಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಬೇಡಿ ಎಂದು ಇಬ್ರಾಹಿಂ ಅವರಿಗೆ ಸಿದ್ದರಾಮಯ್ಯ ಅವರೇ ಹೇಳಿದ್ದರು, ಹಠ ಹಿಡಿದು ಸ್ಪರ್ಧೆ ಮಾಡಿ ಸೋತರು. ಆದರೂ ಅವರನ್ನು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಮಾಡಿದರು. ಒಂದು ಬಾರಿ ಪ್ಲಾನಿಂಗ್ ಕಮಿಷನ್ ಚೇರ್‌ಮನ್ ಮಾಡಿದರು. ಇದಕ್ಕಿಂತ ಹೆಚ್ಚು ಇನ್ನೇನು ಮಾಡುತ್ತೆ ಪಕ್ಷ?'' ಎಂದು ವಾಗ್ದಾಳಿ ನಡೆಸಿದ್ದಾರೆ. 

''ಈಗ ಕುಮಾರಸ್ವಾಮಿ ಅವರು ಮುಂದಿನ ಬಾರಿ ಅಲ್ಪಸಂಖ್ಯಾತ ನಾಯಕನನ್ನು ಜೆ.ಡಿ.ಎಸ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ನೋಣೋಣ. 2004 ರಲ್ಲಿ ಇದೇ ಇಬ್ರಾಹಿಂ ಅವರು ತನ್ನನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಂತೆ ದೇವೇಗೌಡರ ಕೈಕಾಲು ಹಿಡಿದ್ರು, ದೇವೇಗಡರು ಒಪ್ಪಿದರು ಆದರೆ ಕುಮಾರಸ್ವಾಮಿ ಅವರು ಒಪ್ಪಲೇ ಇಲ್ಲ. ಕೊನೆಗೆ ಎಂ.ಎಂ ರಾಮಸ್ವಾಮಿ ಅವರನ್ನು ರಾಜ್ಯಸಭೆಗೆ ಕಳುಹಿಸಿದರು. ದೇವೇಗೌಡರಿಗೆ ಅಲ್ಪಸಂಖ್ಯಾತರ ಬಗ್ಗೆಯಿರುವ ಕಾಳಜಿಯ ಒಂದು ಪರ್ಸೆಂಟ್ ಕುಮಾರಸ್ವಾಮಿ ಅವರಿಗೆ ಇಲ್ಲ. ಗೆಲ್ಲುವ ಅವಕಾಶ ಇದ್ದಾಗ ವಿಜಯ್ ಮಲ್ಯ ಮತ್ತು ಕುಪೇಂದ್ರ ರೆಡ್ಡಿಯನ್ನು ನಿಲ್ಲಿಸಿದ್ರು, ಸೋಲುವಾಗ ಫಾರೂಕ್ ಅವರನ್ನು ನಿಲ್ಲಿಸಿ ಅನ್ಯಾಯವಾಗಿ ಬಲಿಕೊಟ್ಟರು. ನಾನು ಮುಖ್ಯಮಂತ್ರಿ ಆದರೆ ಫಾರೂಕ್ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಗೃಹ ಖಾತೆ ನೀಡುತ್ತೇನೆ ಎಂದು ಚುನಾವಣೆಗೆ ಮೊದಲು ಕುಮಾರಸ್ವಾಮಿ ಭರವಸೆ ನೀಡಿದ್ದರು. 2018 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು, ಫಾರೂಕ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ರಾ? ಫಾರೂಕ್ ಅವರು ನಮ್ಮ ಸಮುದಾಯದಲ್ಲಿ ನನಗೆ ಅವಮಾನ ಆಗ್ತಿದೆ, ಎರಡು ಮಂತ್ರಿ ಹುದ್ದೆ ಖಾಲಿ ಇವೆ, ಒಂದು ದಿನಕ್ಕಾದ್ರೂ ನನ್ನನ್ನು ಮಂತ್ರಿ ಮಾಡಿ ಎಂದು ಕುಮಾರಸ್ವಾಮಿ ಅವರನ್ನು ಕೇಳಿಕೊಂಡಿದ್ದರೂ ಅವರನ್ನು ಮಂತ್ರಿ ಮಾಡಿದ್ರಾ?'' ಎಂದು ಪ್ರಶ್ನಿಸಿದ್ದಾರೆ. 

''ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಮೊದಲು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇದ್ದ ಹಣ ಕೇವಲ 280 ಕೋಟಿ ರೂಪಾಯಿ. ಅವರು ಮುಖ್ಯಮಂತ್ರಿ ಆದಮೇಲೆ ಈ ಅನುದಾನವನ್ನು 3150 ಕೋಟಿಗೆ ಏರಿಸಿದ್ರು. ಸುಮಾರು ಹತ್ತು ಹನ್ನೆರಡು ಪಟ್ಟು ಹೆಚ್ಚಿಗೆ ಅನುದಾನ ನೀಡಿದ್ದ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು. ನಂತರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಮೇಲೆ 2018 ರ ಬಜೆಟ್ ನಲ್ಲಿ ಈ ಅನುದಾನವನ್ನು 1800 ಕೋಟಿಗೆ ಇಳಿಸಿದ್ರು. ಇವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ಯಾ?'' ಎಂದರು. 

''ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕರಾದ ಸುರೇಶ್ ಬಾಬು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನ ಯು.ಬಿ ಸಿಟಿ ಫ್ಲಾಟ್ ಗೆ ಬಂದಿದ್ದರು. ಬೈರತಿ ಸುರೇಶ್ ಅವರಿಗೆ ಬೆಂಬಲ ನೀಡಲು ಕುಮಾರಸ್ವಾಮಿ ಅವರು ನನ್ನ ಕಣ್ಣೆದುರೆ ಹಣದ ವ್ಯವಹಾರ ನಡೆಸಿದ್ದರು. ಈ ಬಗ್ಗೆ ನಾನು ಪ್ರಶ್ನಿಸಿದ್ದಕ್ಕೆ ಉಳಿದ ಮಾತುಕತೆಯನ್ನು ನನಗೆ ಗೊತ್ತಾಗದಂತೆ ನಡೆಸಿದರು. ಬೈರತಿ ಸುರೇಶ್ ಗೆಲ್ಲಲು ಬೇಕಿದ್ದಕ್ಕಿಂತ ಹೆಚ್ಚಿನ ಮತ ಬೀಳಲು ಕುಮಾರಸ್ವಾಮಿ ಕಾರಣ, ಸಿದ್ದರಾಮಯ್ಯ ಅಲ್ಲ'' ಎಂದು ತಿಳಿಸಿದ್ದಾರೆ. 

ಜಾಫರ್ ಷರೀಫ್ ಅವರ ಮೊಮ್ಮಗನ ಮೇಲೆ ಕುಮಾರಸ್ವಾಮಿ ಅವರಿಗೆ ಅಷ್ಟೊಂದು ಪ್ರೀತಿ ಇದ್ದರೆ ಜೆಡಿಎಸ್ ಭದ್ರಕೋಟೆಯಾದ ಮಂಡ್ಯದಲ್ಲೋ, ರಾಮನಗರದಲ್ಲೋ ಟಿಕೆಟ್ ಕೊಟ್ಟು ಗೆಲ್ಲಿಸಬಹುದಿತ್ತು. 

ನಿಮ್ಮ ಮಗನನ್ನು ಮಂಡ್ಯದಲ್ಲಿ ನಿಲ್ಲಿಸುವ ಬದಲುಗೆ ಜಾಫರ್ ಷರೀಫ್ ಮೊಮ್ಮಗನಿಗೆ ಟಿಕೆಟ್ ಕೊಡಬೇಕಿತ್ತು. ಸುಮ್ಮನೆ ಮಾತಾಡೊದಲ್ಲಾ, ಕೆಲಸ ಮಾಡಿ ತೋರಿಸಿ.  ಜಾಫರ್ ಷರೀಫ್ ಮೊಮ್ಮಗ ಚುನಾವಣೆಗೆ ನಿಂತಾಗ ಜೆಡಿಎಸ್ ಅಬ್ದುಲ್ ಅಜೀಂ ಅವರನ್ನು ಅಭ್ಯರ್ಥಿಯನ್ನಾಗಿ ಹಾಕಿದ್ರು. ಜಾಫರ್ ಷರೀಫ್ ಮೊಮ್ಮಗನ ಮೇಲೆ ಪ್ರೀತಿ ಇದ್ದಿದ್ದರೆ ಯಾಕೆ ಮುಸ್ಲಿಂ ಅಭ್ಯರ್ಥಿಯನ್ನು ತಂದು ಎದುರಾಳಿಯಾಗಿ ನಿಲ್ಲಿಸ್ತಾ ಇದ್ರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತಗಳನ್ನು ಒಡೆಯಲು ಬಿಜೆಪಿ ಜೊತೆ ಕೈಜೋಡಿಸಿದ ಕಾರಣಕ್ಕಾಗಿ ಜೆಡಿಎಸ್ ಪಕ್ಷ ಎರಡೂ ಕಡೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ ಎಂದರು.  

ಹಜ್ ಯಾತ್ರೆ ಆರಂಭವಾದ ಮೇಲೆ ಎಲ್ಲಾ ಪಕ್ಷಗಳ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬಂದಿದ್ರು. 2008 ರಿಂದ 13 ರ ವರೆಗಿದ್ದ ಬಿಜೆಪಿ ಮುಖ್ಯಮಂತ್ರಿಗಳು ಕೂಡ ಹಜ್ ಯಾತ್ರೆ ಕಾರ್ಯಕ್ರಮಕ್ಕೆ ಬಂದಿದ್ದರು, ಕುಮಾರಸ್ವಾಮಿ ಅವರು ಒಂದು ಸಲವಾದ್ರೂ ಬಂದಿದ್ದಾರ? ಎಂದು ಪ್ರಶ್ನಿಸಿದ್ದಾರೆ. 

2018 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬೇಡಿ, ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡಿ ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದರು, ನಾನು ಗಲಾಟೆ ಮಾಡಿ ವಿಧಾನಸೌಧದಲ್ಲೇ ಮಾಡಬೇಕು ಅಂದ ಮೇಲೆ ಒಪ್ಪಿದ್ದು. ಇದೇನಾ ಅವರ ಅಲ್ಪಸಂಖ್ಯಾತ ಕಾಳಜಿ? ಇವತ್ತು ಸಮಾಜದ ಎಲ್ಲಾ ಸಮುದಾಯಗಳು ನಮ್ಮ ನಾಯಕರು ಎಂದು ಒಪ್ಪಿದ್ದರೆ ಅದು ಸಿದ್ದರಾಮಯ್ಯ ಅವರನ್ನು ಮಾತ್ರ. ಇದನ್ನು ಕಂಡು ಹೊಟ್ಟೆ ಕಿಚ್ಚಿಗೆ ಕುಮಾರಸ್ವಾಮಿ ಅವರು ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News