ಅರಣ್ಯ ಸಂರಕ್ಷಣಾ ಕಾಯ್ದೆ ತಿದ್ದುಪಡಿಗೆ ಆಕ್ಷೇಪ: ಶಾಸಕಿ ಸೌಮ್ಯಾ ರೆಡ್ಡಿ

Update: 2021-10-16 18:32 GMT

ಬೆಂಗಳೂರು, ಅ.16: ಅರಣ್ಯ ಸಂರಕ್ಷಣಾ ಕಾಯ್ದೆ 1980ಕ್ಕೆ ತಿದ್ದುಪಡಿ ತರುವುದನ್ನು ಆಕ್ಷೇಪಿಸಿ ಮತ್ತು ಪಶ್ಚಿಮ ಘಟ್ಟಕಗಳ ಸಂರಕ್ಷಣೆಯ ಕುರಿತು ಧ್ವನಿಯೆತ್ತುವಂತೆ ವಿನಂತಿಸಿ ಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ ಚಾರಿಟೇಬಲ್ ಅಂಡ್ ವೆಲ್ಫೇರ್ ಟ್ರಸ್ಟ್‍ನ ಸಹದೇವ್ ಎಚ್.ಎಸ್. ಅವರು ನನ್ನನ್ನು ಶಾಸಕರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು ಎಂದು ಶಾಸಕಿ ಸೌಮ್ಯಾರೆಡ್ಡಿ ತಿಳಿಸಿದ್ದಾರೆ.

ಈ ಸಂಬಂಧ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿರುವ ಅವರು, ಭಾರತದ ಅರಣ್ಯ ಪ್ರದೇಶಗಳನ್ನು ಖಾಸಗೀಕರಣಗೊಳಿಸುವ ಹುನ್ನಾರದ ಭಾಗವಾಗಿ ಅರಣ್ಯ ಸಂರಕ್ಷಣಾ ಕಾಯ್ದೆ 1980ಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಇವುಗಳನ್ನು ಜಾರಿಗೆ ತರುವಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅಪಾರ ಶ್ರಮವಹಿಸಿದ್ದರು ಎಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ ಈ ಕಾಯ್ದೆಗೆ ತಿದ್ದುಪಡಿ ಮಾಡಿದ್ದೆ ಆದಲ್ಲಿ ಕೈಗಾರಿಕೋದ್ಯಮಿಗಳಿಗೆ ಅರಣ್ಯ ಸಂಪತ್ತನ್ನು ಬಳಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದಂತಾಗುತ್ತದೆ.  ಅದರಿಂದ ಪರಿಸರ ನಾಶದ ವಿಷಯವನ್ನು ಆದ್ಯತೆಯೆಂದು ಪರಿಗಣಿಸಿ ಎಲ್ಲ ನಾಯಕರು ಮತ್ತು ಸಾರ್ವಜನಿಕರು ಪ್ರಸಕ್ತ ಸಾಲಿನ ನ.1ರ ಒಳಗಾಗಿ ಈ ಕಾಯ್ದೆಯ ವಿರುದ್ಧ ಆಕ್ಷೇಪ ಸಲ್ಲಿಸಬೇಕೆಂದು ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಸೌಮ್ಯಾ ರೆಡ್ಡಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News