‘ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಶಿಫಾರಸ್ಸು’ ಸಾರ್ವಜನಿಕರಿಂದ ಬೆಂಬಲ: ಸುನೀಲ್ ಕುಮಾರ್

Update: 2021-10-16 18:49 GMT

ಬೆಂಗಳೂರು, ಅ.16: ರಾಜ್ಯದಲ್ಲಿ ಮೊದಲ ಬಾರಿ ಆನ್‍ಲೈನ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾರ್ವಜನಿಕರೇ ಶಿಫಾರಸ್ಸು ಮಾಡಲು ಅವಕಾಶ ನೀಡಲಾಗಿತ್ತು. ‘ಸೇವಾ ಸಿಂಧು’ ಮೂಲಕ ಎಲೆಮರೆಯ ಸಾಧಕರನ್ನು ಸಾರ್ವಜನಿಕರು ಗುರುತಿಸುವ ಅವಕಾಶ ಮಾಡಿ ಕೊಡಲಾಗಿತ್ತು.  ಈ ಪ್ರಕ್ರಿಯೆಗೆ ನಾಡಿನ ಜನರು ಭಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಪೈಕಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಜನರ ಸ್ಪಂದನೆ ಹೆಚ್ಚಾಗಿದೆ.  2021-22 ನೇ ಸಾಲಿನ 66ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 6210 ಅರ್ಜಿಗಳು ಇಲಾಖೆಗೆ ಬಂದಿವೆ. ಅವುಗಳಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕೇಂದ್ರ ಕಚೇರಿಗೆ ಭೌತಿಕ 1450 ಅರ್ಜಿಗಳು ಹಾಗೂ `ಸೇವಾ ಸಿಂಧು’ ಮೂಲಕ 4770 ಹೆಸರುಗಳು ಬಂದಿದ್ದು ಅವುಗಳನ್ನು 28,857 ಜನರು ಆನ್‍ಲೈನ್ ಮೂಲಕ ಶಿಫಾರಸ್ಸು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಶಿಕ್ಷಣ, ಸಾಹಿತ್ಯ, ಸಂಗೀತ, ಕಲೆ, ನಾಟಕ, ಕ್ರೀಡೆ, ಕೃಷಿ, ವಿಜ್ಞಾನ-ತಂತ್ರಜ್ಞಾನ ಸೇರಿದಂತೆ 26 ಕ್ಷೇತ್ರಗಳಲ್ಲಿ ಸಾಧಕರ ಅರ್ಜಿಗಳು ಬಂದಿವೆ. 2018-19ನೇ ಸಾಲಿನ 63ನೇ ರಾಜ್ಯೋತ್ಸವ ಪ್ರಶಸ್ತಿಗೆ 1300 ಅರ್ಜಿಗಳು ಬಂದಿದ್ದವು. 2019-20ನೇ ಸಾಲಿನ 64ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 1191 ಅರ್ಜಿಗಳು ಹಾಗೂ 2020-21ನೇ ಸಾಲಿನ 65ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 1144 ಅರ್ಜಿಗಳು ಬಂದಿದ್ದವು ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಅಂಕಿಸಂಖ್ಯೆಗಳನ್ನು ಗಮನಿಸಿದಾಗ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸ್ಪಂದಿಸಿದ್ದು ಕಂಡುಬಂದಿದೆ. ಅದರಂತೆ ಆನ್‍ಲೈನ್ ವ್ಯವಸ್ಥೆ ಮಾಡಿರುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ನೇರವಾಗಿ ಭಾಗಿಯಾಗಿದ್ದು ರಾಜ್ಯೋತ್ಸವ ಪ್ರಶಸ್ತಿಗೆ ಹೆಚ್ಚಿನ ಗೌರವ ತಂದಿದೆ.  ಜೊತೆಗೆ ಈ ಬಾರಿಯ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಸುನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News