×
Ad

ಇತ್ಯರ್ಥ ಪ್ರಕರಣಗಳ ಮರುವಿಚಾರಣೆ ಇಲ್ಲ: ಹೈಕೋರ್ಟ್

Update: 2021-10-17 17:32 IST

ಬೆಂಗಳೂರು, ಅ.17: ಯಾವುದೇ ರೀತಿಯ ಇತ್ಯರ್ಥಪಡಿಸಿದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಮರು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಚೆಕ್‍ಬೌನ್ಸ್ ಸಂಬಂಧಿಸಿದ ಪ್ರಕರಣವನ್ನು ಪುನಾರಂಭಿಸಲು ಕೋರಿದ್ದ ಮನವಿ ತಿರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಕೆ.ನಟರಾಜನ್ ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ನ್ಯಾಯಾಲಯ ಅಥವಾ ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ಒಮ್ಮೆ ಪ್ರಕರಣವನ್ನು ಇತ್ಯರ್ಥಪಡಿಸಿದರೆ ಅದೇ ಅಂತಿಮ ಆದೇಶವಾಗುತ್ತದೆ. ಆದರೆ, ರಾಜಿ ಸಂಧಾನದಲ್ಲಿ ನಡೆದ ಒಪ್ಪಂದದಂತೆ ಹಣ ಪಾವತಿಸದಿದ್ದರೆ ಮಾತ್ರ ಹಣ ವಸೂಲಿಗೆ ಅರ್ಜಿ ಸಲ್ಲಿಸಬಹುದು. 

ನ್ಯಾಯಾಲಯದಲ್ಲಿ ಪ್ರಕರಣದ ಮರು ವಿಚಾರಣೆ ಆರಂಭಿಸಲು ಸಾಧ್ಯವಿಲ್ಲ. ಹಾಗೆಯೇ ಈಗಾಗಲೇ ನಿರ್ಧರಿಸಿದ ಪ್ರಕರಣದ ಆದೇಶವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಏನಿದು ಪ್ರಕರಣ?: ಬ್ಯಾನಿಯನ್ ಪ್ರಾಜೆಕ್ಟ್ ಇಂಡಿಯಾ ಲಿಮಿಟೆಡ್ ಹಾಗೂ ಅರ್ಜಿದಾರ ಶೆಲ್ಲಿ ಎಂ.ಪೀಟರ್ ನಡುವಿನ ಹಣಕಾಸು ವಿವಾದ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಆದರೆ ಇದೇ ವೇಳೆ ಇಬ್ಬರೂ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಸಮ್ಮತಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಪಡಿಸಿ ಆದೇಶಿಸಿತ್ತು. 

ನಂತರ ಬ್ಯಾನಿಯನ್ ಪ್ರಾಜೆಕ್ಟ್ ಸಂಸ್ಥೆ ನೀಡಿದ್ದ ಚೆಕ್‍ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಮೆಮೋ ಸಲ್ಲಿಸಿ ಪ್ರಕರಣವನ್ನು ಮತ್ತೆ ವಿಚಾರಣೆಗೆ ಮಾಡುವಂತೆ ಕೋರಿದ್ದು, ಇದನ್ನು ಕೋರ್ಟ್ ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News