ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆ: ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಕ್ರಮ; ಸಿಎಂ ಬೊಮ್ಮಾಯಿ
Update: 2021-10-17 17:45 IST
ಹುಬ್ಬಳ್ಳಿ, ಅ. 17: `ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆ ಆರ್ಥಿಕತೆಯನ್ನು ಅವಲಂಬಿಸಿದ್ದು, ಉಪ ಚುನಾವಣೆ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ರವಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದ್ದರೆ, ಪೆಟ್ರೋಲ್ ಮೇಲಿನ ತೆರಿಗೆ ಇಳಿಕೆಗೆ ಅವಕಾಶಗಳಿವೆ. ಹೀಗಾಗಿ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಿದರು.
`ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿಂದು ಪಾಲ್ಗೊಂಡಿದ್ದು, ಸಿಂಧಗಿ ಕ್ಷೇತ್ರದಲ್ಲಿಯೂ ಪ್ರಚಾರ ಮಾಡುತ್ತೇನೆ. ಈ ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸ ತಮಗಿದೆ' ವಿಶ್ವಾಸ ವ್ಯಕ್ತಪಡಿಸಿದ್ದಾರೆ.