×
Ad

ಉತ್ತರ ಕರ್ನಾಟಕ ಭಾಗದ ಜನರು ಮುಗ್ಧರು: ಡಾ.ಚಂದ್ರಶೇಖರ ಕಂಬಾರ

Update: 2021-10-17 18:42 IST

ಬೆಂಗಳೂರು, ಅ. 17: `ಬನ್ನಿ ಬಂಗಾರ ನಮ್ಮ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿಯ ಹಬ್ಬ. ಉತ್ತರ ಕರ್ನಾಟಕ ಭಾಗದ ಜನರು ಮುಗ್ದರು, ಅವರಿಗೆ ಚಾಲಾಕಿತನ ಗೊತ್ತಿಲ್ಲ. ಅಲ್ಲಿನ ಸಂಸ್ಕೃತಿ ಸಾಕಷ್ಟು ಸಮೃದ್ಧವಾಗಿದೆ' ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದ್ದಾರೆ.

ರವಿವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ದಿ ಸಂಘದ ವತಿಯಿಂದ ಏರ್ಪಡಿಸಿದ್ದ `ಬನ್ನಿ ಬಂಗಾರ' ಮತ್ತು `ಉತ್ತರ ಕರ್ನಾಟಕ ಸಾಂಸ್ಕೃತಿಕ ಉತ್ಸವ'ಕ್ಕೆ ಚಾಲನೆ ನೀಡಿ, ಸಾಹಿತಿ ಸಂಗಮೇಶ ಬಾದವಾಡಗಿ ಬರೆದಿರುವ `ರೊಟ್ಟಿ ಪಂಚಮಿ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಿಂದ ಬೆಂಗಳೂರಿಗೆ ಬಂದು ಇಲ್ಲಿ ನೆಲೆಸಿರುವ ಎಲ್ಲರೂ ಒಟ್ಟಾಗಿ ಹಬ್ಬ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ' ಎಂದು ಹೇಳಿದರು.

ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಉತ್ತರ ಕರ್ನಾಟಕ ಭಾಗದ ಜನರು 30 ವರ್ಷಗಳಿಂದ ಸಂಘಟನೆ ಮಾಡಿಕೊಂಡು ರೊಟ್ಟಿ ಪಂಚಮಿ, ಬನ್ನಿ ಬಂಗಾರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಜನರಿಗಾಗಿ ಒಂದು ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದ್ದು, ಮುಂಬರುವ ಜನವರಿ 14ಕ್ಕೆ ಶಂಕುಸ್ಥಾಪನೆ ಕಾರ್ಯ ನೆರವೇರಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಎಕ್ಸ್ ಮ್ಯಾಕ್ಸ್ ನಿರ್ದೇಶಕ ದಯಾನಂದ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಮುರುಗೇಶ್ ಜವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿ ವಿ.ಎಸ್.ಸಾಂಬ್ರಾಣಿ, ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ, ಸಾಹಿತಿ ಸಂಗಮೇಶ್ ಬಾದವಾಡಗಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಗೌರವ ಕಾರ್ಯದರ್ಶಿ ಶಂಕರ ಪಾಟೀಲ್, ನಿರ್ದೇಶಕ ದಯಾನಂದ ಪಾಟೀಲ್, ಶಂಕರ ಪಾಗೋಜಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News