''ಮತ ಹಾಕಲು ಬಟನ್ ಒತ್ತಿದ ತಕ್ಷಣ ಸಿಎಂಗೆ ಸಂದೇಶ ಹೋಗಬೇಕು'': ಡಿ.ಕೆ.ಶಿವಕುಮಾರ್

Update: 2021-10-17 14:27 GMT
photo: twitter@DKShivakumar
 

ವಿಜಯಪುರ, ಅ. 17: `ರಾಮನ ತಂದೆ ದಶರಥ ಮಹಾರಾಜನ ವಿಗ್ರಹ ಎಲ್ಲೂ ಇಲ್ಲ. ಆದರೆ, ರಾಮನ ಭಂಟ ಆಂಜನೇಯನ ವಿಗ್ರಹ ಎಲ್ಲೆಡೆ ಕಾಣುತ್ತೇವೆ. ಏಕೆಂದರೆ ಆಂಜನೇಯ ಒಬ್ಬ ತ್ಯಾಗಿ. ನಿಷ್ಠೆ, ಸೇವೆಗೆ ಹೆಸರಾದವನು. ಹೀಗಾಗಿ ಎಲ್ಲೆಡೆ ಆತನ ದೇವಾಲಯಗಳಿವೆ. ನಾವು ಆಂಜನೆಯನಂತೆ ನಿಮ್ಮ ಸೇವೆ ಮಾಡುತ್ತೇವೆ. ನಮಗೆ ಆಶೀರ್ವಾದ ಮಾಡಿ, ಒಂದು ಅವಕಾಶ ನೀಡಿ ಎಂದು ಕೇಳುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಂದಗಿ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ. 

ರವಿವಾರ ಸಿಂದಗಿ ಕ್ಷೇತ್ರದ ಗುಂದಗಿಯಲ್ಲಿನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, `ನಾವು ಇಲ್ಲಿಗೆ ನಿಮ್ಮಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ನಾವೆಲ್ಲ ನಿಮ್ಮ ಜತೆ ಹಾಗೂ ಅಶೋಕ ಮನಗೂಳಿ ಅವರ ಜತೆ ಇದ್ದೇವೆ ಎಂದು ಹೇಳಲು ಬಂದಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷ ಆಗಿದೆ. ಸಿ.ಎಸ್.ಮನಗೂಳಿ ನಿಧನರಾಗಿ 8 ತಿಂಗಳಾಗಿವೆ. ಚುನಾವಣೆ ಬರುತ್ತದೆ ಎಂದು ಎಲ್ಲರಿಗೂ ಗೊತ್ತಿತ್ತು ಅಲ್ಲವೇ? ಮುಂದೆ ಆಗೋದು ಬಿಡಿ, ಈ ಚುನಾವಣೆಗಾಗಿಯಾದರೂ ಈ ಕ್ಷೇತ್ರಕ್ಕೆ ಬಿಜೆಪಿಯವರು ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ?' ಎಂದು ಪ್ರಶ್ನಿಸಿದರು.

`ಕೋವಿಡ್ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಲು, ಚಿಕಿತ್ಸೆ, ಆಕ್ಸಿಜನ್, ಲಸಿಕೆ ಪಡೆಯಲು ಕ್ಯೂ ನಿಲ್ಲುವುದರ ಜತೆಗೆ ಸತ್ತಮೇಲೆ ಶವಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು. ನಮ್ಮ ಅಭ್ಯರ್ಥಿ ಅಶೋಕ ಮನಗೂಳಿ ಕಷ್ಟದ ಸಮಯದಲ್ಲಿ ಜನಕ್ಕೆ ಸ್ವಲ್ಪವಾದರೂ ಸಹಾಯ ಮಾಡಿದರೋ ಇಲ್ಲವೋ? ಆದರೆ, ಬಿಜೆಪಿ ಅವರು ಸಹಾಯ ಮಾಡಿದ್ದರಾ? ಅವರು ಬಂದು ನಿಮ್ಮ ಕಷ್ಟ ಕೇಳಿದರಾ? ಮತ ಕೇಳುವಾಗ ಹೃದಯ ಶ್ರೀಮಂತಿಕೆ ಇರಬೇಕು. ಬರೀ ಸುಳ್ಳು ಹೇಳಿಕೊಂಡು 20 ಲಕ್ಷ ಕೋಟಿ ರೂ. ಕೊಟ್ಟೆ ಎಂದರು. ಯಡಿಯೂರಪ್ಪ 1,800 ಕೋಟಿ ರೂ.ಕೊಡುತ್ತೇನೆಂದರು. ಖಾಸಗಿ ಶಿಕ್ಷಕರಿಗೆ ಹಣ ನೀಡುತ್ತೇವೆಂದರು. ಆದರೆ ಯಾರಿಗಾದರೂ ಬಂತಾ?' ಎಂದು ಶಿವಕುಮಾರ್ ಕೇಳಿದರು.

`ಅವರು ಹಣ ಕೊಟ್ಟಿದ್ದನ್ನು ಕಣ್ಣಲ್ಲೂ ನೋಡಲಿಲ್ಲ, ಕಿವಿಯಲ್ಲೂ ಕೇಳಲಿಲ್ಲ. ಮೋದಿ ಅವರು ಎಲ್ಲ ಬಂದ್ ಮಾಡಿ, ದೀಪ ಹಚ್ಚಿ, ಮಹಾಭಾರತ ಯುದ್ಧ 18 ದಿನಗಳಲ್ಲಿ ಮುಕ್ತಾಯವಾದರೆ, ಕೋವಿಡ್ ವಿರುದ್ಧದ ಯುದ್ಧವನ್ನು 21 ದಿನಗಳಲ್ಲಿ ಮುಕ್ತಾಯ ಮಾಡುತ್ತೇವೆ ಎಂದರು. ನಾವು ಚಪ್ಪಾಳೆ, ಜಾಗಟೆ ಹೊಡೆದೆವು. ನಾನು, ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಎಲ್ಲರೂ ಮನವಿ ಕೊಟ್ಟು, ಸದನದಲ್ಲಿ ಧ್ವನಿ ಎತ್ತಿದರೂ ಬಿಜೆಪಿ ಕೇಳಲಿಲ್ಲ. ಬೆಡ್, ಚಿಕಿತ್ಸೆ, ಆಕ್ಸಿಜನ್ ಎಲ್ಲದರಲ್ಲೂ ದುಡ್ಡು ಹೊಡೆದರು' ಎಂದು ಅವರು ದೂರಿದರು.

`ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ಮಾಡುತ್ತೇವೆ. ಮನಗೂಳಿ ಅವರು ಸಾಯುವ ಮುನ್ನ ನನ್ನ ಮಗ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ನಲ್ಲಿ ಇರಬೇಕು, ಜನರ ಸೇವೆ ಮಾಡಬೇಕು ಎಂದು ಹೇಳಿದರು. ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕುತ್ತೇವೆ ಎಂದು ಹೇಳಿ ಹೋದರು. ಇಂದು ಕಾಂಗ್ರೆಸ್ ಅಶೋಕ ಮನಗೂಳಿ ಅವರಿಗೆ ಟಿಕೆಟ್ ನೀಡಿದೆ. ಯಾರೇ ಬೆನ್ನಿಗೆ ಚೂರಿ ಹಾಕಲು ಪ್ರಯತ್ನ ಮಾಡಿದರೂ, ಈ ಕ್ಷೇತ್ರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದು ಅಶೋಕನ ಚುನಾವಣೆ ಮಾತ್ರ ಅಲ್ಲ. ಇಲ್ಲಿ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಇಲ್ಲಿರುವ ಎಲ್ಲ ನಾಯಕರೂ ಅಭ್ಯರ್ಥಿಗಳೇ' ಎಂದು ಶಿವಕುಮಾರ್ ಹೇಳಿದರು.

`ನೀವು ಕಾಂಗ್ರೆಸ್‍ಗೆ ಮತ ಹಾಕುತ್ತೀರಿ ಎಂದು ಗೊತ್ತಿದೆ. ಆದರೆ, ನೀವು ಒಬ್ಬೊಬ್ಬ ಐದು ಮಂದಿಯ ಮತವನ್ನು ಹಾಕಿಸಿದರಷ್ಟೇ ಅಶೋಕ್ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲು ಸಾಧ್ಯ. ನಮ್ಮ ಮುಸಲ್ಮಾನ ಸ್ನೇಹಿತರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ಜೆಡಿಎಸ್‍ನವರು ಯಾರನ್ನಾದರೂ ನಿಲ್ಲಿಸಲಿ. ಅದು ಅವರ ತಂತ್ರ. ಆದರೆ, ಈ ದೇಶಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳ್ಳೆಯದಾ ಅಥವಾ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯದಾ ಎಂಬಿದನ್ನು ಆಲೋಚಿಸಿ' ಎಂದು ಅವರು ಸಲಹೆ ನೀಡಿದರು.

`ಬಿಜೆಪಿಯ ಒಬ್ಬ ಎಂಪಿ ನಿಮ್ಮ ಸಮುದಾಯವನ್ನು ಪಂಚರ್ ಹಾಕುವವರು ಎಂದ. ಕೋವಿಡ್‍ನಿಂದ ಜನ ಸತ್ತಾಗ ಮುಸಲ್ಮಾನ ಬಾಂಧವರು ಹೆಣ ಹೊತ್ತಿದ್ದಾರೆ. ಅಂತ್ಯಕ್ರಿಯೆ ಮಾಡಿದ್ದಾರೆ. ಆದರೆ, ಅವರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಜನರ ಹಸಿವು ನೀಗಿಸಲು ಕಾಂಗ್ರೆಸ್ ಪಕ್ಷ ಶ್ರಮಿಸಿದೆ. ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಪ್ರತಿ ಕೆ.ಜಿ ಅಕ್ಕಿಗೆ 25ರೂ. ಕೊಟ್ಟರೆ, ಸಿದ್ದರಾಮಯ್ಯ ಅವರು ಇನ್ನೂ ಹಣ ಸೇರಿಸಿ ನಿಮಗೆ 7 ಕೆ.ಜಿ ಅಕ್ಕಿ ಉಚಿತವಾಗಿ ಕೊಟ್ಟರು' ಎಂದು ಶಿವಕುಮಾರ್ ಸ್ಮರಿಸಿದರು.

`ಒಂದೊಂದು ಮತವೂ ಮುಖ್ಯ. ಕಾಂಗ್ರೆಸ್, ದಳದ ಮತಗಳು ವ್ಯರ್ಥವಾಗಬಾರದು. ನಿಮ್ಮ ಮತ ಸ್ವಾಭಿಮಾನದ ಮತ ಆಗಬೇಕು. ಈಗ ನಿಮ್ಮ ಮುಂದೆ ಅವಕಾಶ ಇದೆ. ಅದನ್ನು ನಮಗೆ ಕೊಡಿ ಎಂದು ಕೇಳಲು ಬಂದಿದ್ದೇವೆ. ಇತ್ತೀಚೆಗೆ ನಾಮಪತ್ರ ಸಲ್ಲಿಸುವಾಗ ನಾನು ನೋಡಿದ ಪ್ರೋತ್ಸಾಹ ಅಭೂತಪೂರ್ವ. ಆ ಶಕ್ತಿಯನ್ನು ಕಡೆ ಗಳಿಗೆವರೆಗೂ ಉಳಿಸಿಕೊಂಡು ನೀವು ಮತ ಹಾಕಲು ಬಟನ್ ಒತ್ತಿದ ತಕ್ಷಣ ಸಿಎಂ ಬೊಮ್ಮಾಯಿ ಅವರಿಗೆ ಸಂದೇಶ ಹೋಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಹಾಗೆ. ನಿಮ್ಮನ್ನು ನೀವೇ ಮನಗೂಳಿ ಎಂದು ಭಾವಿಸಿ, ನಿಮ್ಮ ಅಭ್ಯರ್ಥಿ ಗೆಲ್ಲಿಸಿ, ನಮ್ಮನ್ನು ಸೇವಕರನ್ನಾಗಿ ಆಯ್ಕೆ ಮಾಡಬೇಕು' ಎಂದು ಶಿವಕುಮಾರ್ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News