×
Ad

ತೀರ್ಥಹಳ್ಳಿಯಲ್ಲಿ ನಾರಾಯಣ ಗುರು ಜಯಂತಿ; ಸಾಧಕರಿಗೆ ಸನ್ಮಾನ

Update: 2021-10-17 21:58 IST

ಶಿವಮೊಗ್ಗ, ಅ.17:  ತೀರ್ಥಹಳ್ಳಿ ಪಟ್ಟಣದ ಸಂಸ್ಕೃತಿ ಮಂದಿರದ ಮೈದಾನದಲ್ಲಿ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ನಾರಾಯಣ ಗುರು ಪ್ರತಿಮೆಯ ಬೃಹತ್ ಮೆರವಣಿಗೆ ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿ ಅಗ್ರಹಾರದ ನಾರಾಯಣ ಗುರು ಮಂದಿರದಿಂದ ಪ್ರಾರಂಭವಾಯಿತು.

ಸಾವಿರಾರು ಈಡಿಗರ ಸಮುದಾಯದವರ ಜತೆ ಆನೇಕ ಕಲಾ ತಂಡಗಳು ತೀರ್ಥಹಳ್ಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.

 ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸಿ ಮಾತನಾಡಿ,ಸಮಾಜದ ಒಗ್ಗಟ್ಟು ಪ್ರದರ್ಶನ ಇಂದು ಅಗತ್ಯ ಇದೆ ಎಂದರು.

ನಾವೆಲ್ಲರೂ ಸೇರಿ ನಾರಾಯಣ ಗುರು ತತ್ವದಡಿ ಕೆಲಸ ಮಾಡೋಣ. ಯಾವಾಗಲು ನಮಗೆ ಬೇಕಾದ ಹಕ್ಕನ್ನು ಹೋರಾಟದ ಮೂಲಕ ಪಡೆಯಬೇಕು.ಯಾವುದೇ ಜಾತಿಯ, ವ್ಯವಸ್ಥೆಯ ವಿರೋಧ ಅಲ್ಲ, ನಮ್ಮ ಒಗ್ಗಟ್ಟು, ಅವಕಾಶಕ್ಕಾಗಿ ಸಂಘಟನೆ ಮಾಡಬೇಕು ಎಂದರು.

ಅಮೃತ ಮಠದ  ಈಡಿಗ ಸ್ವಾಮೀಜಿ  ರೇಣುಕಾನಂದ ಶ್ರೀಗಳು ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಯುವ ಶಕ್ತಿ ಸಂಘಟಿತರಾದರೆ ಸಮಾಜ ಉದ್ದಾರ ಸಾಧ್ಯ ಎಂದರು.

ಮನುಷ್ಯ ಸತ್ತ ನಂತರ ಮಣ್ಣಲ್ಲಿ ಮಣ್ಣಾಗುತ್ತಾನೆ.ಜೀವ ಇರುವಾಗ ಎಲ್ಲರೂ ಒಂದಾಗಿ ಬಾಳಬೇಕು. ಹಳ್ಳಿ ಹಳ್ಳಿಯಲ್ಲೂ ಸಂಘಟನೆ ಆಗಬೇಕು. ಈಡಿಗ ಸಮುದಾಯ ಒಂದಾಗಬೇಕು ಎಂದು ಕರೆ ನೀಡಿದರು.

ಶ್ರೀ ನಾರಾಯಣ ಗುರು ವೇದಿಕೆ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಈಡಿಗ ಸಮುದಾಯ ಒಗ್ಗಟ್ಟು ಆಗದಿದ್ದರೆ ಯಾವುದೇ ಸೌಲಭ್ಯ ಸಿಗಲ್ಲ. ಸರ್ಕಾರಕ್ಕೆ ಈ ಬಗ್ಗೆ ದನಿ ಎತ್ತಬೇಕು ಎಂದು ಹೇಳಿದರು.

ರಾಜ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ. ತಿಮ್ಮೆಗೌಡ ಮಾತನಾಡಿ, ರಾಜ್ಯದಲ್ಲಿ ಈಡಿಗ ನಿಗಮದ ಬಗ್ಗೆ ಮುಖ್ಯ ಮಂತ್ರಿಗಳ ಜತೆ ಮಾತನಾಡಲಾಗಿದೆ. ರಾಜ್ಯದ ಈಡಿಗ ಸಂಘಟನೆಗೆ ರಾಜ್ಯ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಈಡಿಗ ಸಮುದಾಯದ ನಾಯಕರಾದ ಮಾಲೀಕಯ್ಯ ಗುತ್ತೇದಾರ್, ರಾಜಶೇಖರ್ ಕೋಟ್ಯಾನ್, ಪ್ರವೀಣ್ ಹಿರೇಇಡಗೋದು, ಡಾ. ಗೋವಿಂದ ಬಾಬು ಪೂಜಾರಿ, ಸಿನಿಮಾ ಸಾಹಿತಿ ಕವಿರಾಜ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಸಂಘಟನೆ ಅಧ್ಯಕ್ಷ ವಿಶಾಲ್ ಕುಮಾರ್, ಈಡಿಗರ ಸಂಘದ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರ, ಬಿಲ್ಲವ ಸಂಘದ ಅಧ್ಯಕ್ಷ ಮಂಜುನಾಥ್ ಇತರರು ಇದ್ದರು.

ಹೊದಲ ಶಿವು ಸ್ವಾಗತಿಸಿ, ರಾಜ್ಯ ಕಾರ್ಯಧ್ಯಕ್ಷ ರಾಘವೇಂದ್ರ ಮುಡುಬ ಪ್ರಾಸ್ತವಿಕ ಮಾತನಾಡಿದರು. ಅನಿಲ್ ಮಿಲ್ಕೆರಿ ವಂದಿಸಿದರು.

ಈಡಿಗ ಸಮುದಾಯದ  ಬಹುತೇಕ ಎಲ್ಲಾ ನಾಯಕರು ಹಾಜರಿದ್ದರು. ಸುಮಾರು 2000ಕ್ಕೂ ಹೆಚ್ಚು ಈಡಿಗ ಸಮುದಾಯವರು ಭಾಗಿಯಾಗಿದ್ದು ತೀರ್ಥಹಳ್ಳಿಯಲ್ಲಿ ಈಡಿಗ ಸಮುದಾಯದ ಒಗ್ಗಟ್ಟು ಪ್ರದರ್ಶನವಾಯಿತು.ಪಕ್ಷ ಬೇಧ ಮರೆತು ಈಡಿಗ ಸಮುದಾಯದ ಬಹುತೇಕ ನಾಯಕರು, ಉದ್ಯಮಿಗಳು, ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ಸಾಧಕರಿಗೆ ಸನ್ಮಾನ:

 ಈ ಬೃಹತ್  ಸಮಾರಂಭದಲ್ಲಿ ಈಡಿಗ ಸಮುದಾಯದ ಸಾಧಕರಾದ ಚಿತ್ರ ಸಾಹಿತಿ ಕವಿರಾಜ್, ಮಾದರಿ ಉದ್ಯಮಿ ಗೋಪಾಲ್ ಬಾಬು ಪೂಜಾರಿ, ಹಿನ್ನೆಲೆ ಗಾಯಕಿ ದಿವ್ಯಾ ರಾಮಚಂದ್ರ, ಎಸ್ಸೆಸೆಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಶ್ರೀಷ, ಸಮಾಜ ಸೇವಕರಾದ ಗೋಪಾಲ ಪೂಜಾರಿ, ಪ್ರಮೋದ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News