ಪ್ರಧಾನಿ ಮೋದಿ ಕಟೌಟ್ ಗೆ ನೂರು ರೂ. ಹಾರ; ಇಂಧನ ಬೆಲೆಯೇರಿಕೆ ಖಂಡಿಸಿ ಮೈಸೂರಿನಲ್ಲಿ ವಿನೂತನ ಪ್ರತಿಭಟನೆ
ಮೈಸೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರಧಾನ ಮಂತ್ರಿ ನರೇಂದ್ರಮೋದಿ ಕಟೌಟ್ ಗೆ ನೂರು ರೂ. ಗಳ ಹಾರ ಹಾಕಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಅಣಕು ಪ್ರತಿಭಟನೆಯನ್ನು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಸೋಮವಾರ ನಡೆಸಲಾಯಿತು.
ನಗರದ ಆರ್.ಟಿ.ಓ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರುಗಳು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಬಿಜೆಪಿಯವರು ರಾಕ್ಷಸರು, ಪೆಟ್ರೋಲ್, ಡೀಸೆಲ್ ಮೇಲೆ ಅಧಿಕ ತೆರಿಗೆ ವಿಧಿಸಿ ಜನಸಾಮಾನ್ಯರ ಕತ್ತು ಕೊಯ್ಯುವ ಕೆಲಸವನ್ನು ಮಾಡುತ್ತಿದ್ದಾರೆ. ಈ ರಾಕ್ಷಸರ ಆಡಳಿತವನ್ನು ಕೊನೆಗೊಳಿಸಿ ದೇಶವನ್ನು ಉಳಿಸಬೇಕಿದೆ ಎಂದು ಹೇಳಿದರು.
ಪೆಟ್ರೋಲ್,ಡೀಸೆಲ್ ಬೆಲೆ ಏರಿಸುವ ಮೂಲಕ ಎಲ್ಲಾ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ವಿಸಲಾಗಿದೆ. ಜನಸಾಮಾನ್ಯರು ಬದುಕು ನಡೆಸುವುದೇ ಕಷ್ಟವಾಗಿದೆ. ಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಿ 400 ರೂ.ಬಂದರೆ ಪೆಟ್ರೋಲ್ ಗೆ 200 ರೂ. ನೀಡಬೇಕಿದೆ. ಇನ್ನು ಕುಟುಂಬದ ನಿರ್ವಹಣೆ ಹೇಗೆ ಎಂದು ಪ್ರಶ್ನಿಸಿದರು.
ಇದೀಗ ತಾನೆ ದಸರಾ ಹಬ್ಬ ಮುಗಿದಿದೆ. ಶ್ರೀಚಾಮುಂಡೇಶ್ವರಿ ತಾಯಿ ಮಹಿಷನನ್ನು ಮರ್ದಿನಿ ಮಾಡಿದ ಹಾಗೆ ಈ ರಾಕ್ಷರನ್ನು ಸಂಹಾರ ಮಾಡಬೇಕಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಗುಣಶೇಖರ್, ಉದ್ಯಮಿ ದೀಪಕ್, ಗೋಪಿ, ಸುನೀಲ್, ಫಾರೂಖ್, ಶ್ರೀಧರ್, ಜಯಶಂಕರ್, ಜೋಗಿ ಮಹೇಶ್, ಪ್ರತಿಧ್ವನಿ ಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು